      ಈ ಪುಟದ ಪ್ರೂಫ್ ರೀದಿಂಗ್ ಮಾಡಬೇಕಿದೆ ; ನಂತರ ಈ ಸಾಲು ತೆಗೆದುಹಾಕಿ

ಉಪಗ್ರಹ, ಕೃತಕ: ಒಂದು ಆಕಾಶಕಾಯದ (ಭೂಮಿ, ಚಂದ್ರ, ಇತ್ಯಾದಿ) ಸುತ್ತಲೂ ಪರಿಭ್ರಮಿಸಲು ಮನುಷ್ಯ ನಿಯೋಜಿಸಿರುವ ಸಾಧನ (ಆರ್ಟಿಫಿಷಲ್ ಸ್ಯಾಟಲೈಟ್). ಚಂದ್ರನಂಥ ನೈಸರ್ಗಿಕ ಉಪಗ್ರಹವಾಗಲಿ ಭೂಮಿಯಿಂದ ನಾವು ಕಳುಹಿಸಬಹುದಾದ ಕೃತಕ ಉಪಗ್ರಹಗಳಾಗಲಿ ಪಾಲಿಸಬೇಕಾದ ನಿಯಮಗಳೇನೇನು ಎಂಬುದನ್ನು ೧೭ನೆಯ ಶತಮಾನದಲ್ಲಿಯೇ ಇಂಗ್ಲೆಂಡಿನ ವಿಖ್ಯಾತ ವಿಜ್ಞಾನಿ ನ್ಯೂಟನ್ ಅವನ ಗ್ರಂಥದಲ್ಲಿ ಬರೆದಿಟ್ಟಿದ್ದ. ನಾವು ಭೂಮಿಯಿಂದ ಸೆಕೆಂಡಿಗೆ ೮ ಕಿಮೀ. ವೇಗಕ್ಕಿಂತ ಕಡಿಮೆ ವೇಗದಲ್ಲಿ ಯಾವ ಕಾಯವನ್ನೆಸೆದರೂ ಅದು ತಿರುಗಿ ಭೂಮಿಗೇ ಬೀಳುತ್ತದೆ. ಭೂಮೇಲ್ಮೈಯ ಹತ್ತಿರ ಆದರೆ ವಾಯುಮಂಡಲದ ಹೊರಗಡೆ ಸೆಕೆಂಡಿಗೆ ೮ಕಿಮೀ. ವೇಗದಲ್ಲಿ ಭೂತಲಕ್ಕೆ ಸಮಾಂತರವಾಗಿ ಒಂದು ಕಾಯವನ್ನೆಸೆದರೆ ಅದು ಭೂಮಿಯನ್ನು ವೃತ್ತಕಕ್ಷೆಯಲ್ಲಿ ಪರಿಭ್ರಮಿಸ ತೊಡಗುತ್ತದೆ. ಸೆಕೆಂಡಿಗೆ ೮-೧೧ ಕಿಮೀ. ವೇಗದಲ್ಲಿ ಅಲ್ಲಿ ಎಸೆದಂಥ ಕಾಯಗಳಾದರೋ ಭೂಮಿಯನ್ನು ವಿವಿಧ ದೀರ್ಘವೃತ್ತ (ಎಲಿಪ್ಸ್‌, ಬಾದಾಮಿಯ ಆಕಾರ) ಕಕ್ಷೆಗಳಲ್ಲಿ ಸುತ್ತುಹಾಕುತ್ತಿರುತ್ತವೆ. ಅದೇ ಸ್ಥಳದಲ್ಲಿ ಸೆಕೆಂಡಿಗೆ ೧೧ ಕಿಮೀ.ಗಿಂತ ಹೆಚ್ಚಿನ ವೇಗದಿಂದ ಕಾಯವನ್ನೆಸೆದರೆ ಅದು ಭೂಮಿಯ ಗುರುತ್ವಾಕರ್ಷಣದಿಂದ ತಪ್ಪಿಸಿಕೊಂಡು ಹೊರಟು ಹೋಗುತ್ತದೆ. ಇವೆಲ್ಲ ಅಂಶಗಳೂ ನ್ಯೂಟನ್ನನ ಗುರುತ್ವಾಕರ್ಷಣ ನಿಯಮಗಳಿಂದ ಸಿದ್ಥಿಸುತ್ತವೆ. ಸೆಕೆಂಡಿಗೆ ೮ಕಿಮೀ.ಗಳಂಥ ಪ್ರಚಂಡ ವೇಗಗಳನ್ನು ಸಾಧಿಸಬಲ್ಲ ವಿಧಾನಗಳನ್ನು ವಿಚಾರಪೂರ್ವಕವಾಗಿ ಮೊದಲು ವಿಮರ್ಶೆಮಾಡಿದ ಕೀರ್ತಿ ರಷ್ಯದ ಪ್ರೌಢಶಾಲಾ ಉಪಾಧ್ಯಾಯ ಕಾನ್ಸ್ಟ್ಯಾಂಟಿನ್ ಸóಯಾಲ್ಕೋಸ್ಕಿ ಎಂಬಾತನಿಗೆ ಸಲ್ಲುತ್ತದೆ. ಆ ದಿಸೆಯಲ್ಲಿ ರಾಕೆಟ್ ಯಂತ್ರಗಳ ಸ್ಪಷ್ಟ ಉಪಯುಕ್ತತೆಯನ್ನು ಅವನು ಗುರುತಿಸಿದ್ದಷ್ಟೇ ಅಲ್ಲದೆ ರಾಕೆಟ್ ಟ್ರೈನ್ ಎಂಬ ಅವನ ಯೋಜನೆಯಲ್ಲಿ ಹಲವಾರು ಅಂಥ ಯಂತ್ರಗಳನ್ನು ಜೋಡಿಸಿ ಅವು ಹಂತ ಹಂತವಾಗಿ ಒಂದಾದಮೇಲೊಂದು ಕೆಲಸ ಮಾಡಿ ಬಳಿಕ ಕಳಚಿಹೋಗುವಂತೆ ವ್ಯವಸ್ಥೆಗೊಳಿಸುವ ಗಮನಾರ್ಹ ತಂತ್ರವನ್ನೂ ಸಹ ಪ್ರತಿಪಾದಿಸಿದ್ದ. ಇಂಥ ವೇಗೋತ್ಪಾದಕ ಯಂತ್ರಗಳನ್ನು ಘನ ಇಂಧನಗಳಿಂದ ನಡೆಸುವ ಬದಲು ದ್ರವ ಇಂಧನಗಳಿಂದ ನಡೆಸುವುದು ಉತ್ತಮಮಾರ್ಗ ಎಂದೂ ಇವನು ಅಭಿಪ್ರಾಯಪಟ್ಟಿದ್ದ (೧೮೯೮). ಇದಾದಮೇಲೆ ಅಮೆರಿಕದ ಗಾಡರ್ಡ್ (೧೯೧೯) ಮತ್ತು ಜರ್ಮನಿಯ ಓಬರ್ತ್ (೧೯೨೩) ಎಂಬುವರು ಇಂಥ ಅಧಿಕ ವೇಗಗಳನ್ನು ರಾಕೆಟಿನಂಥ ಪ್ರತಿಕ್ರಿಯಾ ಯಂತ್ರಗಳಿಂದ ಯಶಸ್ವಿಯಾಗಿ ಸಾಧಿಸಬಹುದು ಎಂಬ ಬಗ್ಗೆ ಸ್ಪಷ್ಟವಾದ ಪ್ರಾಯೋಗಿಕ ಪುರಾವೆಗಳನ್ನು ಒದಗಿಸಿಕೊಟ್ಟರು.
ಜಗತ್ತಿನ ಮೊದಲನೆಯ ಕೃತಕ ಉಪಗ್ರಹವನ್ನು ರಷ್ಯನರು ೧೯೫೭ ಅಕ್ಟೋಬರ್ ೪ರಂದು ಭೂಮಿಯ ಸುತ್ತಲ ಕಕ್ಷಯೊಂದರಲ್ಲಿ (ಆರ್ಬಿಟ್) ಯಂತ್ರಗಳ ನೆರವಿಲ್ಲದೆ ತನ್ನಷ್ಟಕ್ಕೆ ತಾನೇ ಚಲಿಸುವಂತೆ ಮಾಡಿ ಪ್ರಪಂಚದ ಜನರೆಲ್ಲರನ್ನೂ-ಪಾಮರರನ್ನೇ ಅಲ್ಲದೆ ವಿಜ್ಞಾನಿಗಳನ್ನೂ ಬೆರಗುಗೊಳಿಸಿದರು. ಇದಕ್ಕೆ ಅವರು ಸ್ಪುಟ್ನಿಕ್ (ಅಂದರೆ ಸಹಪ್ರವಾಸಿ) ಎಂದು ಹೆಸರಿಟ್ಟರು. ಇದರ ದೀರ್ಘವೃತ್ತ ಕಕ್ಷೆಯ ಉತ್ಕೇಂದ್ರತೆ (ಎಕ್ಸೆಂಟ್ರಿಸಿಟಿ) ಅತ್ಯಲ್ಪ. ಭೂಮಿ ನೀಚಸ್ಥಾನದಲ್ಲಿ (ಪೆರಿಜಿ) ಈ ಕಕ್ಷೆಯ ಎತ್ತರ ೨೨೮ ಕಿಮೀ., ಉಚ್ಚಸ್ಥಾನದಲ್ಲಿ (ಅಪೋಜಿ) ೯೪೭ ಕಿಮೀ. ಕಕ್ಷೆಯ ತಲ ಭೂಮಧ್ಯ ವೃತ್ತಕ್ಕೆ ೬೫೦ ಗಳಷ್ಟು ಓರೆಯಾಗಿದ್ದಿತು. ಕಕ್ಷೆಯಲ್ಲಿ ಪ್ರಥಮ ಸ್ಪುಟ್ನಿಕ್ ಉಪಗ್ರಹ ಒಂದು ಪರಿಭ್ರಮಣೆ ಮುಗಿಸಲು ಬೇಕಾಗುತ್ತಿದ್ದ ಕಾಲ (ಪರಿಭ್ರಮಣಾವಧಿ) ಸುಮಾರು ೯೬.೧೭ ಮಿನಿಟುಗಳು. ಅದು ೯೨ ದಿವಸಗಳ ಕಾಲ ಭೂಮಿಯನ್ನು ಪಶ್ಚಿಮದಿಂದ ಪೂರ್ವಕ್ಕೆ ಸುತ್ತು ಹಾಕುತ್ತಿದ್ದು ೧೯೫೮ ಜನವರಿಯಲ್ಲಿ ಕಕ್ಷೆಯಿಂದ ಜಾರಿ ಭೂ ವಾಯುಮಂಡಲ ದೊಳಗಡೆ ವಾಯುಸಂಘರ್ಷಣದ ಪರಿಣಾಮವಾಗಿ ಸುಟ್ಟು ನಾಶವಾಯಿತು. ಸರಿಸುಮಾರು ಗೋಳಾಕಾರದಲ್ಲಿದ್ದ ಈ ಪ್ರಥಮ ಸ್ಪುಟ್ನಿಕಿನ ವ್ಯಾಸ ಸುಮಾರು ೫೮ ಸೆಂಮೀ; ತೂಕ ೮೩.೬ ಕಿಗ್ರಾಂ.; ಅದರ ಗೂಡು ಅಲ್ಯುಮಿನಿಯಂನಿಂದಾ ದದ್ದು; ನೀಚಸ್ಥಾನದಲ್ಲಿ ಅದರ ಕಕ್ಷಾವೇಗ ಸೆಕೆಂಡಿಗೆ ೮.೪ ಕಿಮೀ; ಉಚ್ಚಸ್ಥಾನದಲ್ಲಿ ಸೆಕೆಂಡಿಗೆ ೭.೬ ಕಿಮೀ. 
ಅಂತರಿಕ್ಷವಾಹನವೊಂದರ ಉಡಾವಣೆಗಾಗಿ (ಲಾಂಚಿಂಗ್) ಒಂದೇ ಒಂದು ರಾಕೆಟ್ ಯಂತ್ರವನ್ನು ಬಳಸಿಕೊಂಡ ಪಕ್ಷದಲ್ಲಿ ನಮಗೆ ಇದುವರೆಗೆ ತಿಳಿದಿರುವಂತೆ ಸಾಕಷ್ಚು ಉಪಯುಕ್ತವಾಗಬಲ್ಲ ವಾಹನಗಳಿಗೆ ಸೆಕೆಂಡಿಗೆ ಸುಮಾರು ೫ಕಿ.ಮೀ. ಗಳಿಗಿಂತ ಹೆಚ್ಚಿನ ವೇಗವನ್ನು ದಕ್ಷರೀತಿಯಲ್ಲಿ ನೀಡಬಲ್ಲ ಇಂಧನಗಳಾವುವೂ ಇಲ್ಲ. ಆದ್ದರಿಂದ ಸೆಕೆಂಡಿಗೆ ೮-೧೦ ಕಿಮೀ.ಗಳ ವೇಗದಲ್ಲಿ ಕ್ಷಿಪಣಿಗಳನ್ನು (ಮಿಸೈಲ್) ಹಾರಿಸಬೇಕಾದರೆ ಹಲವು ಹಂತಗಳ ರಾಕೆಟ್ ಸಂಯೋಜನೆಯನ್ನೇ ಉಪಯೋಗಿಸಬೇಕಾಗುತ್ತದೆ. ಪ್ರಥಮ ಸ್ಪುಟ್ನಿಕ್ಕನ್ನು ಬಾಹ್ಯಾಂತರಿಕ್ಷಕ್ಕೆ ಹಾರಿಸಿದ ರಾಕೆಟ್ ಸಂಯೋಜನೆಯ ಒಟ್ಟು ತೂಕ ೧೦೦ ಟನ್ನುಗಳು; ಹಂತಗಳು ಮೂರು. ಮೊದಲನೆಯ ಹಂತದಲ್ಲಿ ಸಮಗ್ರ ರಾಕೆಟ್-ವಾಹನ ವ್ಯವಸ್ಥೆಯ ವೇಗ ಸೆಕೆಂಡಿಗೆ ೨ ಕಿಮೀ.ಗೆ ಏರಿತು. ಕೂಡಲೆ ಮೊದಲನೆಯ ಹಂತದ ರಾಕೆಟ್ ಈ ವ್ಯವಸ್ಥೆಯಿಂದ ಕೆಳಕ್ಕೆ ಕಳಚಿಬಿತ್ತು. ಎರಡನೆಯದು ಹೊತ್ತಿಕೊಂಡು ವ್ಯವಸ್ಥೆಯನ್ನು ಸೆಕೆಂಡಿಗೆ ೫.೫ ಕಿಮೀ. ವೇಗಕ್ಕೆ ತಂದು ಬಳಿಕ ಆ ಹಂತವೂ ಕಳಚಿಬಿತ್ತು. ಅನಂತರ ಮೂರನೆಯ ಹಂತ ವೇಗವನ್ನು ಸೆಕೆಂಡಿಗೆ ೮ ಕಿಮೀ. ಗಿಂತ ಅಧಿಕಗೊಳಿಸಿ ಕೃತಕ ಉಪಗ್ರಹವನ್ನು ಬಿಡುಗಡೆ ಮಾಡಿತು. ಆರಂಭದಲ್ಲಿ ಸಮಗ್ರ ರಾಕೆಟ್ವಾಹನ ವ್ಯವಸ್ಥೆ ನೇರವಾಗಿ ಮೇಲಕ್ಕೆದ್ದು ಕೆಲವು ಸೆಕೆಂಡುಗಳಲ್ಲಿಯೇ ಸ್ವಲ್ಪ ಸ್ವಲ್ಪವಾಗಿ ವಾಲಿಕೊಳ್ಳುತ್ತ ಹೋಯಿತು. ಮೊದಲನೆಯ ಹಂತ ಕಳಚಿಕೊಂಡಾಗ ಅದು ಭೂತಲಕ್ಕೆ ೪೫೦ ಓರೆಯಾಗಿತ್ತು. ಉಪಗ್ರಹ ರಾಕೆಟ್ಟಿನಿಂದ ಬಿಡುಗಡೆಯಾದಾಗ ಅದು ನೆಲದಿಂದ ೫೦೦ ಕಿಮೀ.ಗಳ ಎತ್ತರದಲ್ಲಿ ಭೂತಲಕ್ಕೆ ಸರಿಸುಮಾರಾಗಿ ಸಮಾಂತರವಾಗಿಯೇ ಚಲಿಸತೊಡಗಿತ್ತು.	
ಭೂಕಕ್ಷೆಯಲ್ಲಿ ಕೃತಕ ಉಪಗ್ರಹವನ್ನು ಸ್ಥಾಪಿಸುವುದರಲ್ಲಿ ಅಮೆರಿಕನರು ಮೊದಲನೆಯ ಬಾರಿ ಸಫಲರಾದದ್ದು ೧೯೫೮ ಫೆಬ್ರವರಿ ೧ರಂದು. ಅವರ ಉಪಗ್ರಹದ ಹೆಸರು ಪ್ರಥಮ ಎಕ್ಸ್‌ಪ್ಲೋರರ್; ತೂಕ ಕೇವಲ ೧೪ಕಿಗ್ರಾಂ; ಉದ್ದ ೨೩೦ ಸೆಂಮೀ.; ಆಕಾರ ೧೫ ಸೆಂಮೀ. ವ್ಯಾಸದ ಸ್ತಂಭಾಕೃತಿ. ಪ್ರಥಮ ಎಕ್ಸ್‌ಪ್ಲೋರರಿನ ಎತ್ತರ ಉಚ್ಚಸ್ಥಾನದಲ್ಲಿ ೨,೫೪೮ ಕಿ.ಮೀ.; ನೀಚಸ್ಥಾನದಲ್ಲಿ ೩೫೬ ಕಿಮೀ; ಪರಿಭ್ರಮಣಾವಧಿ ೧೧೪.೮ ಮಿನಿಟುಗಳು; ಸರಾಸರಿ ವೇಗ ಸೆಕೆಂಡಿಗೆ ಸರಿಸುಮಾರು ೮ಕಿಮೀ. ಸಮಭಾಜಕವೃತ್ತದಿಂದ ಕಕ್ಷಾತಲದ ಕೋನಾಂತರ ೩೪೦.
ಎಕ್ಸ್‌ಪ್ಲೋರರಿನ ರಾಕೆಟ್ ವ್ಯವಸ್ಥೆ ನಾಲ್ಕು ಹಂತಗಳದು, ೨೭ ಟನ್ ತೂಕದ್ದು. ೨೦ ಮೀಟರ್ ಎತ್ತರದ್ದು. ಮೊದಲನೆಯ ಹಂತ ಎರಡೂವರೆ ಮಿನಿಟುಗಳ ಕಾಲ ಉರಿದು ಕ್ಷಿಪಣೆಯನ್ನು ೮೦ ಕಿಮೀ. ಎತ್ತರಕ್ಕೆ ಎತ್ತಿ ಸೆಕೆಂಡಿಗೆ ೩ ಕಿಮೀ. ವೇಗಕ್ಕೆ ತರುತ್ತದೆ. ಈ ಹಂತ ಕಳಚಿಕೊಂಡ ಮೇಲೆ ೭ಮಿನಿಟುಗಳ ಕಾಲ ಕ್ಷಿಪಣಿ ತಾನಾಗಿಯೇ ಅಂತರಿಕ್ಷದಲ್ಲಿ ಜಾರುತ್ತಿರುತ್ತದೆ (ಕೋಸ್ಟಿಂಗ್). ಆಗ ನೆಲದಿಂದ ರೇಡಿಯೋ ಸಂಕೇತವನ್ನು ಕಳುಹಿಸಿ ಎರಡನೆಯ ಹಂತದ ಇಂಧನಗಳನ್ನು ಹೊತ್ತಿಸುತ್ತಾರೆ. ಅದಾದಮೇಲೆ ಕ್ರಮವಾಗಿ ಮೂರನೆಯ ನಾಲ್ಕನೆಯ ಹಂತಗಳೂ ಕಾಲಕ್ಕೆ ಸರಿಯಾಗಿ ಹೊತ್ತಿಕೊಂಡು ಅಂತ್ಯದಲ್ಲಿ ಉಪಗ್ರಹವನ್ನು ಸೆಕೆಂಡಿಗೆ ೮ ಕಿಮೀ. ವೇಗದಲ್ಲಿ ಬಿಡುಗಡೆಮಾಡುತ್ತವೆ.
ಎಲ್ಲ ಕೃತಕ ಉಪಗ್ರಹಗಳಲ್ಲಿಯೂ ಅನೇಕ ಸಾಧನೋಪಕರಣಗಳ ವೈವಿಧ್ಯಪೂರ್ಣ ಪ್ರಪಂಚವೇ ಅಡಕವಾಗಿರುತ್ತದೆ. ಈ ಸಾಧನಗಳು ಉಪಗ್ರಹದೊಳಗಿನ ಮತ್ತು ಹೊರಗಿನ ಸಂಮರ್ದ ಉಷ್ಣತೆಗಳನ್ನೂ ಉಪಗ್ರಹದ ಮೇಲೆ ಮಳೆಗರೆಯುವ ಉಲ್ಕೆಗಳನ್ನು ವಿಶ್ವಕಿರಣ ಗಳನ್ನೂ ಸೂರ್ಯ ಮತ್ತು ನಕ್ಷತ್ರಗಳು ಪ್ರಸಾರ ಮಾಡುತ್ತಿರುವ ದೃಶ್ಯ ಬೆಳಕನ್ನೂ ಅತಿನೇರಳೆ ಬೆಳಕನ್ನೂ, ಎಕ್ಸ್‌ಕಿರಣಗಳನ್ನೂ, ಉನ್ನತವಾಯುಮಂಡಲದ ವಿದ್ಯುತ್ಸ್ಥಿತಿಯನ್ನೂ ಕಾಂತಕ್ಷೇತ್ರ ವನ್ನೂ ಅಳೆಯುತ್ತವೆ. ಹೀಗೆ ಅಳೆದು ನಿರ್ಣಯಿಸಿದ ಅಂಕಿಅಂಶಗಳನ್ನೂ ರೇಡಿಯೋ ಸಂಕೇತಗಳ ಮೂಲಕ ಭೂಮಿಗೆ ಕಳುಹಿಸುವ ರೇಡಿಯೋ ಪ್ರೇಷಕ (ಟ್ರಾನ್ಸ್‌ಮಿಟರ್) ಭೂಮಿಯಿಂದ ಕಳುಹಿಸಿದ ಸಂಕೇತದ ಆಜ್ಞೆಗಳನ್ನು ಉಪಕರಣಗಳಿಗೆ ಮತ್ತು ಪ್ರೇಷಕಕ್ಕೆ ಸಾಗಿಸಬಲ್ಲ ರೇಡಿಯೋ ಗ್ರಾಹಕ (ರಿಸೀವರ್), ಪ್ರೇಷಕ ಗ್ರಾಹಕಗಳಿಗೆ ವಿದ್ಯುಚ್ಛಕ್ತಿಯನ್ನೂ ಒದಗಿಸಬಲ್ಲ ವಿದ್ಯುತ್ಕೋಶಗಳು ಇವಕ್ಕೂ ಉಪಗ್ರಹಗಳಲ್ಲಿ ಸ್ಥಳ ಮೀಸಲಾಗಿರುತ್ತದೆ.				(ಆರ್.ಎಲ್.ಎನ್.)
ರಾಕೆಟ್ ಯಂತ್ರಗಳ ತತ್ತ್ವ: ಉಪಗ್ರಹಗಳೇ ಮೊದಲಾದ ಅಂತರಿಕ್ಷ ವಾಹನಗಳನ್ನು ಅವುಗಳ ಕಕ್ಷೆಗಳಿಗೆ ಒಯ್ಯಲು ಬಳಸುವ ವಾಹಕ ರಾಕೆಟುಗಳು ಸಾಮಾನ್ಯವಾಗಿ ಬಾಣಬಿರುಸು ಗಳಂತೆ ರಾಸಾಯನಿಕ ದ್ರವ್ಯಗಳ ದಹನ ಕ್ರಿಯೆಯನ್ನು ಅವಲಂಬಿಸಿ ಕೆಲಸಮಾಡುತ್ತವೆ. ಮಕ್ಕಳಾಟದ ಒಂದು ರಬ್ಬರ್ ಬೆಲೂನಿನ ಮೂಲಕ ಇಂಥ ರಾಕೆಟುಗಳ ಚಾಲಕಸಾಮರ್ಥ್ಯವನ್ನು ಚಿಕ್ಕ ಪ್ರಮಾಣದಲ್ಲಿ ಪ್ರದರ್ಶಿಸಬಹುದು. ವಾಯು ತುಂಬಿಸಿ ಬಾಯಿಕಟ್ಟಿರುವ ಬೆಲೂನಿಗೆ ಯಾವೆಡೆಗೆ ಚಲಿಸುವ ಪ್ರವೃತ್ತಿಯೂ ಇರುವುದಿಲ್ಲವಷ್ಟೆ; ಆದರೆ ಕಟ್ಟಿದ ಬಾಯನ್ನು ಬಿಚ್ಚಿ ಬಿಟ್ಟೊಡನೆಯೇ ಆ ಬೆಲೂನು ತೆರೆದ ಬಾಯಿಗೆ ವಿಮುಖವಾದ ದಿಸೆಯಲ್ಲಿ ವೇಗೋತ್ಕರ್ಷ ಗೊಂಡು ಸೊಯ್ಯನೆ ಚಲಿಸತೊಡಗುವುದು. ಕೆಲವರ ಮನಸ್ಸಿನಲ್ಲಿ ಆಟದ ಬೆಲೂನಿನ ಈ ವರ್ತನೆ ಅದರಿಂದ ನಿರ್ಗಮಿಸುವ ಗಾಳಿ ಹೊರಗಿನ ವಾಯುರಾಶಿಯನ್ನು ಹಿಂದಕ್ಕೆ ತಳ್ಳುವುದರಿಂದ ಉಂಟಾಗುವ ಪ್ರತಿಕ್ರಿಯೆಯ ಫಲ ಎಂಬ ತಪ್ಪು ಕಲ್ಪನೆಯಿರಬಹುದು. ಆದರೆ ವಾಯುತುಂಬಿಸಿ ಬಾಯಿತೆರೆದ ಬೆಲೂನನ್ನು ನಿರ್ವಾತಗೊಳಿಸಿದ ಆವರಣವೊಂದರಲ್ಲಿ ಬಿಡುಗಡೆ ಮಾಡಿ ನೋಡಿದಾಗ ಬೆಲೂನಿನ ವೇಗೋತ್ಕರ್ಷಕ್ಕೂ ಹೊರಗಿನ ವಾಯುರಾಶಿಗೂ ಸಂಬಂಧವಿಲ್ಲದಿರುವ ಅಂಶ ರುಜುವಾತಾಗುತ್ತದೆ. ನಿರ್ವಾತಾವರಣದಲ್ಲಿ ಆ ವೇಗೋತ್ಕರ್ಷ ನಿಜಕ್ಕೂ ಇನ್ನಷ್ಟು ಹೆಚ್ಚುವುದೇ ವಿನಾ ಕುಗ್ಗುವುದಿಲ್ಲ. ಬೆಲೂನಿನ ವೇಗೋತ್ಕರ್ಷಕ್ಕೆ ನಿಜವಾದ ಕಾರಣ ನಿರ್ಗಮಾವಕಾಶವನ್ನು ಪಡೆದು ಇನ್ನೂ ಬೆಲೂನಿನೊಳಗೇ ಉಳಿದುಕೊಂಡಿರುವ ವಾಯುವೇ ಹೊರತು ಅಲ್ಲಿಂದ ನಿಷ್ಕ್ರಮಿಸಿ ಹೋಗಿರುವ ಗಾಳಿಯಾಗಲೀ ಬಾಹ್ಯ ವಾತಾವರಣವಾಗಲೀ ಅಲ್ಲ. ಇದನ್ನರಿಯಲು ನಾವು ಮೊದಲು ಬಾಯಿಕಟ್ಟಿರುವ ಬೆಲೂನಿನ ಪ್ರಕರಣವನ್ನು ತೆಗೆದುಕೊಳ್ಳೋಣ.
ಒಳಗಿರುವ ಸಂಮರ್ದಿತ ವಾಯು ಈ ಸಂದರ್ಭದಲ್ಲಿ ಬೆಲೂನಿನ ರಬ್ಬರ್ ಕಾಯದ ಎಲ್ಲ ಪ್ರದೇಶಗಳನ್ನೂ ಒಂದೇ ಪ್ರಮಾಣದಲ್ಲಿ ಹೊರಮುಖ ಒತ್ತಡಕ್ಕೆ ಗುರಿಮಾಡುತ್ತದೆ (ಚಿತ್ರ ೧-ಂ). ಕಾಯದ ಬೇರೆ ಬೇರೆ ಪ್ರದೇಶಗಳ ಮೇಲೆ ವರ್ತಿಸುವ ಸಂಮರ್ದ ಬಲಗಳು ತತ್ಫಲವಾಗಿ ಆಗ ಪರಸ್ಪರ ರದ್ದುಗೊಂಡು ಬಾಯಿ ಕಟ್ಟಿದ ಬೆಲೂನನ್ನು ಯಾವೆಡೆಗೂ ವೇಗೋತ್ಕರ್ಷಗೊಳಿಸಲಾರದೆ ಹೋಗುವುವು. ಆದರೆ ಕಟ್ಟಿರುವ ಬಾಯನ್ನು ಬಿಚ್ಚಿದಾಗ ಅಲ್ಲಿ ಬೆಲೂನಿನ ರಬ್ಬರ್ ಕಾಯದಿಂದ ಆಕ್ರಮಿತವಾಗದ ಕಂಡಿಯೊಂದು ಏರ್ಪಡುತ್ತದೆ. ಈ ಹೊಸ ಪರಿಸ್ಥಿತಿಯಲ್ಲಿ ಕಂಡಿಗೆ ಎದುರಾಗಿರುವ ಬೆಲೂನ್ ಭಾಗದ ಮೇಲೆ ವರ್ತಿಸುವ ಸಂಮರ್ದಬಲಗಳು ರದ್ದಾಗಲು ಸಾಧ್ಯವಿಲ್ಲವಷ್ಟೆ. ಆದ್ದರಿಂದಲೇ ಈ ಬಲಗಳು ಬಾಯಿ ತೆರೆದ ಬೆಲೂನನ್ನು ಆ ಬಾಯಿಗೆ ಎದುರಾಗಿರುವ ದಿಕ್ಕಿನಲ್ಲಿ ತಳ್ಳಿ ವೇಗೋತ್ಕರ್ಷಗೊಳಿಸಲು ಸಮರ್ಥವಾಗುತ್ತವೆ (ಚಿತ್ರ ೧-ಃ). ಇದುವರೆಗೆ ಬೆಲೂನಿನ ಆವರಣದೊಳಗಿನ ಎಲ್ಲ ಸ್ಥಳಗಳಲ್ಲಿಯೂ ವಾಯುಸಂಮರ್ದದ ಪರಿಮಾಣ ಒಂದೇ ಆಗಿರುತ್ತದೆ. ಇನ್ನು ಬಾಯಿ ತೆರೆದ ತರುವಾಯವಾದರೋ ಒಳಗಿದ್ದ ವಾಯು ಬೆಲೂನ್ ಆವರಣದಿಂದ ಹೊರಕ್ಕೆ ನುಗ್ಗಲಾರಂಭಿಸುವುದರಿಂದ ಆವರಣದೊಳಗಡೆ ಸಂಮರ್ದದ ಹಂಚಿಕೆ ಮಾರ್ಪಡಬೇಕಾಗುವುದು. ಹಾಗೆ ಮಾರ್ಪಟ್ಟ ಹಂಚಿಕೆಯಲ್ಲಿ ವಾಯುಸಂಮರ್ದ ಬೆಲೂನಿನ ಬಾಯಿಯ ಬಳಿ ಮಿಕ್ಕೆಲ್ಲ ಕಡೆಗಳಿಗಿಂತಲೂ ಕ್ಷೀಣವಾಗಿದ್ದು ಅಲ್ಲಿಂದ ಹೆಚ್ಚು ಹೆಚ್ಚು ಒಳಕ್ಕೆ ಹೋದಂತೆಲ್ಲ ತೀವ್ರಗತಿಯಲ್ಲಿ ವೃದ್ಧಿಗೊಳ್ಳುತ್ತದೆ. ಬೆಲೂನಿನ ರಬ್ಬರ್ ಕಾಯದ ಮೇಲೆ ವರ್ತಿಸುವ ಸಂಮರ್ದ ಬಲಗಳ ಪೈಕಿ ರದ್ದಾಗದೆ ಉಳಿದುಕೊಳ್ಳುವ ಪ್ರಬುದ್ಧ ಬಲಗಳ ಪ್ರಮಾಣ ಇದರಿಂದ ಮೊದಲಿಗಿಂತಲೂ ಹೆಚ್ಚಾಗಿ ಆ ಬಲಗಳು ತುಸುಕಾಲ ಬೆಲೂನನ್ನು ಮುಂಚಿನಂತೆಯೇ ಅದರ ಬಾಯಿಗೆ ವಿಮುಖವಾದ ದಿಸೆಯಲ್ಲಿ ಜೋರಾಗಿ ತಳ್ಳುತ್ತ ಹೋಗುವುವು (ಚಿತ್ರ ೧-ಅ). ಈ ಕೊನೆಯ ಪರಿಸ್ಥಿತಿಗೂ ರಾಕೆಟ್ ಯಂತ್ರಗಳು ಕೆಲಸ ಮಾಡುವ ರೀತಿಗೂ ತತ್ತ್ವóಶಃ ಯಾವ ವ್ಯತ್ಯಾಸವೂ ಇಲ್ಲ. ಆದರೆ ಅಂತರಿಕ್ಷಗಾಮಿ ರಾಕೆಟುಗಳು ಬೆಲೂನಿನ ನಿದರ್ಶನದಲ್ಲಿ ಕಂಡುಬರುವುದಕ್ಕಿಂತ ಕೋಟ್ಯಂತರ ಪಾಲು ಸತ್ತ್ವಯುತವಾಗಿರಬೇಕಲ್ಲದೆ ಒಂದೆರಡು ಕ್ಷಣಗಳಿಗೆ ಬದಲು ಕೆಲವಾರು ಮಿನಿಟುಗಳಷ್ಟು ದೀರ್ಘಕಾಲ ಕೆಲಸ ಮಾಡಬೇಕಾಗುವುದು. ಆದ್ದರಿಂದ ಅವಶ್ಯ ಸಂಮರ್ದಬಲಗಳಿಗೆ ಜನ್ಮ ನೀಡಿ ನಿಷ್ಕಾಸವಾಗಬೇಕಾದ ಅನಿಲಗಳನ್ನು ಈ ಯಂತ್ರಗಳೊಳಗೆ ಮೊದಲೇ ಸ್ವತಂತ್ರ ಸ್ಥಿತಿಯಲ್ಲಿ ಶೇಖರಿಸಿಡಲು ಸಾಧ್ಯವೇ ಇಲ್ಲ. ಬದಲು ದೊಡ್ಡ ದೊಡ್ಡ ರಾಸಾಯನಿಕ ರಾಕೆಟುಗಳಲ್ಲಿ ಅಂಥ ಅನಿಲಗಳನ್ನು ವೇಗೋತ್ಕರ್ಷದ ಅಗತ್ಯವಿರುವಷ್ಟು ಕಾಲವೂ ದ್ರವ ಅಥವಾ ಘನರೂಪದಲ್ಲಿರುವ ಪದಾರ್ಥಗಳ ದಹನದಿಂದ ಅವಿಚ್ಛಿನ್ನವಾಗಿ ಉತ್ಪಾದಿಸ ಲಾಗುವುದು. ಅಂತರಿಕ್ಷಗಾಮಿ ಯಂತ್ರಗಳು ನಿರ್ವಾತಪ್ರದೇಶದಲ್ಲಿ ಕೆಲಸ ಮಾಡಬೇಕಾಗುವುದ ರಿಂದ ಉರಿಯುವ ದ್ರವ್ಯಗಳಷ್ಟನ್ನೇ (ಇಂಧನ) ಅಲ್ಲದೆ ಆ ದ್ರವ್ಯಗಳನ್ನು ಉರಿಯುವಂತೆ ಮಾಡುವ ಆಕ್ಸಿಜನ್ ಮುಂತಾದ ಉತ್ಕರ್ಷಣಕಾರಿಗಳನ್ನೂ ಅವುಗಳಲ್ಲಿ ಪೂರ್ವಭಾವಿಯಾಗಿ ಶೇಖರಿಸಿಡುವುದು ಅತ್ಯಾವಶ್ಯಕ. ಇಂಧನ, ಉತ್ಕರ್ಷಣಕಾರಿಗಳು ಉಭಯಸಾಮಾನ್ಯವಾಗಿ ಚಾಲಕದ್ರವ್ಯಗಳೆನಿಸಿಕೊಳ್ಳುತ್ತವೆ (ಪ್ರೊಪೆಲೆಂಟ್ಸ್‌). ಈವರೆಗೆ ನಡೆದಿರುವ ಮುಖ್ಯ ಅಂತರಿಕ್ಷ ಕಾರ್ಯಕ್ರಮಗಳಲ್ಲೆಲ್ಲ ದ್ರವರೂಪದಲ್ಲಿರುವ ಚಾಲಕದ್ರವ್ಯಗಳೇ ವಿಶೇಷವಾಗಿ ಬಳಕೆಗೆ ಬಂದಿವೆ. ಇಂಥ ಕಾರ್ಯಕ್ರಮಗಳಲ್ಲಿ ಉಪಯೋಗಿಸುವ ರಾಕೆಟುಗಳು ಸಕ್ರಿಯವಾಗಿರುವಾಗ ಪ್ರತಿ ಸೆಕೆಂಡಿನಲ್ಲೂ ಸಹಸ್ರಾರು ಲೀಟರು ಚಾಲಕದ್ರವ್ಯಗಳನ್ನು ವೆಚ್ಚಮಾಡುತ್ತವೆ. ವಾಯುತುಂಬಿಸಿ ಬಾಯಿ ತೆರೆದ ಬೆಲೂನಿನ ವೇಗೋತ್ಕರ್ಷಕ್ಕೆ ನಿರ್ವಾತಾವರಣ ಅಡ್ಡಿಯಾಗುವ ಬದಲು ನಿಜಕ್ಕೂ ಅನುಕೂಲಕರವೆಂದು ಮೇಲೆ ತಿಳಿಸಲಾಗಿದೆ. ಇದೇ ಮೇರೆಗೆ ರಾಕೆಟ್ ಯಂತ್ರಗಳ ದಕ್ಷತೆ ಹಾಗೂ ಚಾಲಕಸಾಮರ್ಥ್ಯಗಳು ವಾತಾವರಣದಲ್ಲಿಗಿಂತ ಅಂತರಿಕ್ಷದ ನಿರ್ವಾತ ಪ್ರದೇಶದಲ್ಲಿ ಇನ್ನೂ ಉತ್ತಮಗೊಳ್ಳುವುವು.
ರಾಕೆಟ್ಟುಗಳನ್ನು ಪ್ರತಿಕ್ರಿಯಾ ಯಂತ್ರಗಳೆಂದು (ರಿಯಾಕ್ಷನ್ ಎಂಜಿನ್ಸ್‌) ವರ್ಣಿಸುವುದು ವಾಡಿಕೆಯಾಗಿದೆ. ಆದರೆ ಈ ಸಂಬಂಧದಲ್ಲಿ ಒಂದೆರಡು ಸ್ಪಷ್ಟನೆಯ ನುಡಿಗಳು ಅವಶ್ಯ. ಮೇಲಿನ ಬೆಲೂನ್ ನಿದರ್ಶನವನ್ನು ತೆಗೆದುಕೊಂಡು ಹೇಳುವುದಾದರೆ ವಿಸ್ತೃತಗೊಂಡ ಬೆಲೂನಿನ ರಬ್ಬರ್ಕಾಯ ಒಳಗಿರುವ ವಾಯುವನ್ನು ಹೊರಕ್ಕೆ ತಳ್ಳುತ್ತದೆ; ಆದ್ದರಿಂದ ನ್ಯೂಟನ್ನಿನ ಮೂರನೆಯ ಚಲನನಿಯಮದ ಮೇರೆಗೆ ಹಾಗೆ ತಳ್ಳಿಸಿಕೊಡುವ ವಾಯು ಕೂಡ ಪ್ರತಿಕ್ರಿಯಾರೂಪವಾಗಿ ರಬ್ಬರ್ ಕಾಯವನ್ನು ವಿರುದ್ಧ ದಿಸೆಯಲ್ಲಿ ಅಷ್ಟೇ ಬಲದಿಂದ ತಳ್ಳುತ್ತದೆ. ಎಂತಲೇ ವಾಡಿಕೆಯ ದೃಷ್ಟಿಯಲ್ಲಿ ಬೆಲೂನು ಒಂದು ಪ್ರತಿಕ್ರಿಯಾ ಯಂತ್ರಮಾದರಿ ಯಾಯಿತು. ಈ ದೃಷ್ಟಿಕೋನದಂತೆ ಬೆಲೂನು ತನ್ನಲ್ಲಿರುವ ವಾಯುವನ್ನು ಹೊರತಳ್ಳುವುದು ಕಡ್ಡಾಯವಾಗಿ ಕ್ರಿಯೆಯೇ (ಆ್ಯಕ್ಷನ್) ಆಗಬೇಕು. ಆ ವಾಯು ಬೆಲೂನನ್ನು ವಿರುದ್ಧ ದಿಸೆಯಲ್ಲಿ ನೂಕುವುದು ಪ್ರತಿಕ್ರಿಯೆಯೇ ಆಗಬೇಕು. ಆದರೆ ನ್ಯೂಟನ್ನಿನ ಮೂರನೆಯ ಚಲನನಿಯಮ ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಗೆ ವಿಪರ್ಯಯ ಮಾಡಬಹುದಾದ ಪರಿಪೂರ್ಣ ಸಮಾನಸ್ಥಾನಗಳನ್ನು ನೀಡುತ್ತದೆ. ಅಂದರೆ ಸಂಮರ್ದಿತ ವಾಯು ಬೆಲೂನನ್ನು ತಳ್ಳುವುದು ಕ್ರಿಯೆಯೂ ಬೆಲೂನು ವಾಯುವನ್ನು ಹೊರಕ್ಕೆ ನೂಕುವುದು ಪ್ರತಿಕ್ರಿಯೆಯೂ ಆಗಲು ಅಭ್ಯಂತರವಿಲ್ಲ-ನಮ್ಮ ಮೂಲ ಆಸಕ್ತಿ ಬೆಲೂನಿನ ವೇಗೋತ್ಕರ್ಷದಲ್ಲಿರುವುದಾದರೆ ಈ ವಿಪರ್ಯಯಸ್ಥ ವರ್ಣನೆಯೇ ನಿಜಕ್ಕೂ ಭಾಷಾದೃಷ್ಟಿಯಿಂದ ಹೆಚ್ಚು ಸಮರ್ಪಕವೆನಿಸುತ್ತದೆ. ಈ ಅಂಶವನ್ನು ಗ್ರಹಿಸಿದ ಬಳಿಕ ವಾಡಿಕೆಯಲ್ಲಿ ಪ್ರತಿಕ್ರಿಯಾ ಯಂತ್ರಗಳೆನಿಸಿಕೊಳ್ಳದ ರೈಲು ಬಸ್ಸುಗಳು ಕೂಡ ವೇಗೋತ್ಕರ್ಷಗೊಳ್ಳಲು ಬಲಗಳನ್ನು (ಕಿಯೆ) ಬೇಡಿಯೇ ಬೇಡುತ್ತವೆಂದೂ ಆ ಸಂದರ್ಭಗಳಲ್ಲೂ ಮೂರನೆಯ ಚಲನನಿಯಮದ ಪ್ರಕಾರ ಅನುರೂಪ ಪ್ರತಿಕ್ರಿಯಾ ಬಲಗಳು ಅಸ್ತಿತ್ವಕ್ಕೆ ಬಂದೇ ತೀರಬೇಕೆಂದೂ ಹೊಳೆದು ಮನಸ್ಸಿನಲ್ಲಿ ಇವೆರಡು ಸನ್ನಿವೇಶಗಳಿಗಿರುವ ಭೇದವಾದರೂ ಏನೆಂದು ಗೊಂದಲವುಂಟಾಗುವುದು ಸಹಜ. ಆ ಭೇದ ಇಷ್ಟೆ : ಒಂದು ಪ್ರಕರಣದಲ್ಲಿ ತಳ್ಳಿಸಿಕೊಳ್ಳುವ ಬೆಲೂನಿನಿಂದ ಹೊರ ಹೊಮ್ಮುವ ಪ್ರತಿಕ್ರಿಯಾ ಬಲಕ್ಕೆ (ಬೇಕಿದ್ದರೆ ಅದನ್ನು ವಾಡಿಕೆಯಂತೆ ಕ್ರಿಯೆ ಎಂದೇ ಕರೆಯಿರಿ) ಗುರಿಯಾಗುವ ದ್ರವ್ಯ ಆ ಬೆಲೂನ್ ಆವರಣದೊಳಗಡೆಯಲ್ಲೇ ಇರುತ್ತದೆ (ಸಂಮರ್ದಿತ ವಾಯು); ಇನ್ನೊಂದು ಪ್ರಕರಣದಲ್ಲಾದರೋ ತಳ್ಳಿಸಿಕೊಳ್ಳುವ ರೈಲು ಬಸ್ಸುಗಳಿಂದ ಉದ್ಭವಿಸುವ ಪ್ರತಿಕ್ರಿಯಾಬಲಗಳಿಗೆ ಗುರಿಯಾಗುವ ದ್ರವ್ಯಗಳು ಬಲುಮಟ್ಟಿಗೆ ಆ ವಾಹನಗಳ ಹೊರಗಡೆ ಇರುತ್ತವೆ (ಕಂಬಿ, ರಸ್ತೆ, ಅಂತಿಮವಾಗಿ ಭೂಮಿ). ರಾಕೆಟ್ ಯಂತ್ರದ ಪರಿಸ್ಥಿತಿ ಬೆಲೂನ್ ಪ್ರಕರಣವನ್ನು ಹೋಲುತ್ತದೆ. ಆದ್ದರಿಂದಲೇ ವೇಗೋತ್ಕರ್ಷಕ್ಕೆ ಗುರಿಯಾಗಬೇಕಾದ ರಾಕೆಟ್ ಗೂಡಿನ ಪ್ರತಿಕ್ರಿಯಾಬಲವನ್ನು ಹೊರಿಸುವ ಸಲುವಾಗಿ ಅಪಾರ ಪರಿಮಾಣದ ದ್ರವ್ಯರಾಶಿಯನ್ನು ಇಂಧನ ಉತ್ಕರ್ಷಣಕಾರಿಗಳ ರೂಪದಲ್ಲಿ ಆ ಯಂತ್ರದೊಳಗೇ ಶೇಖರಿಸಿಡ ಬೇಕಾಗುವುದು. (ಅಂತರಿಕ್ಷದ ನಿರ್ವಾತಪ್ರದೇಶದಲ್ಲಿ ಆ ಬಲವನ್ನು ಹೊರುವಂಥ ಯಾವ ಬಾಹ್ಯ ದ್ರವ್ಯಗಳೂ ಸಿಗುವುದಿಲ್ಲವಷ್ಟೆ.) ಹೀಗಾಗಿ ಅಂತರಿಕ್ಷಗಾಮಿ ರಾಕೆಟುಗಳ ಯಾನಪೂರ್ವ ತೂಕದಲ್ಲಿ ಮುಕ್ಕಾಲಿಗೂ ಹೆಚ್ಚು ಭಾಗವೆಲ್ಲ ಕೇವಲ ಚಾಲಕದ್ರವ್ಯಗಳದೇ ಆಗಿರುತ್ತದೆ. ಈ ವಿಶ್ಲೇಷಣೆಯಿಂದ ರಾಕೆಟ್ಯಂತ್ರಗಳ ಕ್ರಿಯಾವಿಧಾನಕ್ಕೆ ನ್ಯೂಟನ್ನನ ಮೂರನೆಯ ಚಲನನಿಯಮವೇ ತಳಹದಿ ಎಂಬ ವಾಡಿಕೆಯ ಮಾತು ಅಷ್ಟೇನೂ ತರ್ಕಬದ್ದವಾದುದಲ್ಲ ವೆಂದು ಗೊತ್ತಾಗುವುದು. ವಾಸ್ತವಿಕವಾಗಿ ಈ ಮೂರನೆಯ ನಿಯಮ ರಾಕೆಟುಗಳು ಚಾಲಕ ದ್ರವ್ಯಗಳ ಬಗ್ಗೆ ಪ್ರದರ್ಶಿಸುವ ಅತೀವ ದಾಹಕ್ಕೆ, ತತ್ಫಲವಾಗಿ ಇಂದಿನ ಅಂತರಿಕ್ಷ ಸಂಶೋಧನೆ ಗಳಿಗೆ ತಗಲುವ ಅಪಾರ ವೆಚ್ಚಕ್ಕೆ, ಕಾರಣವೆಂದು ಹೇಳುವುದು ಹೆಚ್ಚು ಸೂಕ್ತ.
ಈಗ ಮುಕ್ಕಾಲಿಗೂ ಹೆಚ್ಚು ಭಾಗ ಯಾನಪೂರ್ವತೂಕ ಚಾಲಕದ್ರವ್ಯಗಳದಾಗಿರುವ ರಾಕೆಟ್ಚಾಲಿತ ಅಂತರಿಕ್ಷಗಾಮಿ ವಾಹನವೊಂದು ತನ್ನ ವೇಗವೃದ್ಧಿಯನ್ನು ಎರಡು ರೀತಿಗಳಲ್ಲಿ ಸಾಧಿಸಿಕೊಳ್ಳುತ್ತದೆನ್ನಬಹುದು. ಪ್ರತ್ಯಕ್ಷವಾಗಿ ಮೇಲೆ ಸೂಚಿಸಿರುವಂತೆ ಯಂತ್ರದಿಂದ ನಿಷ್ಕಾಸವಾ ಗಲಿರುವ ದಹನೋತ್ಪಾದಿತ ಅನಿಲಗಳು ಅದನ್ನು ವಿಮುಖ ದಿಸೆಯಲ್ಲಿ ಅವಿಚ್ಭಿನ್ನವಾಗಿ ತಳ್ಳುತ್ತ ಹೋಗುತ್ತವೆ. ಪರೋಕ್ಷವಾಗಿ, ಚಾಲಕದ್ರವ್ಯಗಳು ಉರಿದು ನಿಷ್ಕಾಸವಾದಂತೆಲ್ಲ ವಾಹನವ್ಯವಸ್ಥೆ ಕ್ರಮಕ್ರಮವಾಗಿ ಹಗುರಗೊಂಡು, ಎಂದಿನಷ್ಟು ಪರಿಮಾಣದ ತಳ್ಳಿಕೆಯೇ ಕಾಲ ಸರಿದಂತೆ ವಾಹನದ ವೇಗವನ್ನು ಮೊದಲಿಗಿಂತ ತೀವ್ರಗತಿಯಲ್ಲಿ ಹೆಚ್ಚಿಸುತ್ತಲೂ ಹೋಗುವುದು. ಇನ್ನು ಯಂತ್ರದಲ್ಲಿ ಚಾಲಕದ್ರವ್ಯಗಳನ್ನು ಶೇಖರಿಸಿಡಲು ತೊಟ್ಟಿ ಮುಂತಾದ ರಚನಾವಿಭಾಗಗಳು ಅವಶ್ಯವಷ್ಟೆ. ರಾಕೆಟ್ಟಿನ ವೇಗೋತ್ಕರ್ಷದ ಫಲವಾಗಿ ವೆಚ್ಚವಾಗುವ ಸಾಮಗ್ರಿಯನ್ನು ಕೇವಲ ಚಾಲಕದ್ರವ್ಯಗಳಿಗೇ ಸೀಮಿತವಾಗಿಟ್ಟುಕೊಳ್ಳದೆ ಈ ರಚನಾವಿಭಾಗ ಗಳಿಗೂ ವ್ಯಾಪಕಗೊಳಿಸುವ ಚಮತ್ಕಾರಿಕ ತಂತ್ರವೊಂದರಿಂದ ರಾಕೆಟ್ಚಾಲಿತ ವಾಹನಗಳಲ್ಲಿ ಮತ್ತೂ ಹೆಚ್ಚಿನ ವೇಗಗಳನ್ನು ಉತ್ಪಾದಿಸಬಹುದು. ಇಂಥ ಯೋಜನೆಯಲ್ಲಿ ಅತಿ ದೊಡ್ಡ ತೊಟ್ಟಿಗಳನ್ನುಳ್ಳ ಭಾರಿ ದೈತ್ಯಾಕಾರದ ಒಂದೇ ರಾಕೆಟ್ಟನ್ನು ರಚಿಸಿಡುವ ಬದಲು ಒಟ್ಟಿನಲ್ಲಿ ಅಷ್ಟೇ ಚಾಲಕದ್ರವ್ಯಗಳನ್ನು ತುಂಬಿಕೊಳ್ಳಬಲ್ಲ ಮೂರುನಾಲ್ಕು ಪ್ರತ್ಯೇಕ ರಾಕೆಟುಗಳನ್ನು ನಿರ್ಮಿಸಿ ಅವನ್ನು ಹಂತಹಂತವಾಗಿ ಒಂದರ ಮೇಲೊಂದು ಜೋಡಿಸಿ ಬಂಧಿಸುತ್ತಾರೆ. ಉಪಯುಕ್ತ ಪಾವತಿಹೊರೆಯನ್ನೊಳಗೊಂಡ (ಪೇಲೋಡ್) ವಾಹನವನ್ನು ಈ ವ್ಯವಸ್ಥೆಯ ಕೊನೆಯ ಹಂತದ ರಾಕೆಟ್ಟಿನ ಮೇಲುಗಡೆ ಜೋಡಿಸಲಾಗುವುದು. ಈ ರೀತಿಯ ಏರ್ಪಾಡಿನಲ್ಲಿ ಒಂದೊಂದು ಹಂತದ ರಾಕೆಟ್ ಕೆಲಸಮಾಡಿ ಅದರ ಚಾಲಕದ್ರವ್ಯಗಳು ಬರಿದಾದಾಗಲೂ ಆ ಇಡೀ ಯಂತ್ರವನ್ನೇ ಉಳಿದ ಯಂತ್ರಗಳಿಂದ ಪ್ರತ್ಯೇಕಿಸಿ ವಿಸರ್ಜಿಸಬಹುದು. ಮೊದಲನೆಯ ರಾಕೆಟ್ ಕೆಲಸಮಾಡಿ ಕಳಚಿಕೊಂಡಾಗ ಎರಡನೆಯ ಹಂತದ ರಾಕೆಟ್ ಕ್ರಿಯೋನ್ಮುಖವಾಗು ವುದು. ಅದೂ ಬರಿದಾಗಿ ಕಳಚಿಕೊಂಡಾಗ ಮೂರನೆಯ ಹಂತರ ಸರದಿ, ಇತ್ಯಾದಿ. ಹೀಗೆ ಕೆಲಸಮಾಡಿ ಮುಗಿಸಿದ ರಾಕೆಟುಗಳು ಹಂತಹಂತವಾಗಿ ಕಳಚಿಕೊಳ್ಳುವುದರಿಂದ ಕೇವಲ ಚಾಲಕದ್ರವ್ಯಗಳ ತೂಕವೇ ಅಲ್ಲದೆ ಅವುಗಳ ಶೇಖರಣೆಗೆ ಅವಶ್ಯವಾದ ರಚನಾವಿಭಾಗ ಗಳ ತೂಕ ಕಡಿಮೆಯಾಗುತ್ತ ಬಂದು ಕೊನೆಯ ಹಂತಕ್ಕೆ ಜೋಡಿಸಿರುವ ವಾಹನ ಎಂದಿಗಿಂತ ಅಧಿಕವಾದ ವೇಗವನ್ನು ಗಳಿಸುತ್ತದೆ. ಉಪಗ್ರಹ ಮುಂತಾದ ಅಂತರಿಕ್ಷವಾಹನಗಳ ಉಡಾವಣೆಯಲ್ಲಿ ಬಳಸಲಾಗುವ ರಾಕೆಟ್ಯಂತ್ರಗಳ ಬಗ್ಗೆ ಅರಿತುಕೊಳ್ಳಬೇಕಾದ ಪ್ರಧಾನ ತಾತ್ತ್ವಿಕ ವಿವರಗಳು ಇವಿಷ್ಟು. (ನೋಡಿ-[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ರಾಕೆಟ್)
ಉಪಗ್ರಹಗಳ ಕಕ್ಷಾಚಲನೆ: ಕೃತಕ ಭೂಉಪಗ್ರಹಗಳು ಸಂಕೀರ್ಣ ಉಪಕರಣಗಳನ್ನೊಳ ಗೊಂಡ ಮಾನವನಿರ್ಮಿತ ಅಂತರಿಕ್ಷವಾಹನಗಳು. ಇವನ್ನು ಭೂಮೇಲ್ಮೈಯಿಂದ ಎತ್ತಿ ವಾಯುಮಂಡಲದ ವ್ಯಾಪ್ತಿಯಾಚೆಗೆ ಕೊಂಡೊಯ್ದು ಅಲ್ಲಿ ಸೂಕ್ತವೇಗದೊಡನೆ ಸೂಕ್ತದಿಸೆ ಯಲ್ಲಿ ಬಿಡುಗಡೆ ಮಾಡುವುದಷ್ಟೆ ಈವರೆಗೆ ಪ್ರಸ್ತಾಪಿಸಿದ ವಾಹಕ ರಾಕೆಟ್ಟುಗಳ ಕೆಲಸ. ರಾಕೆಟ್ಟುಗಳಿಂದ ಪ್ರತ್ಯೇಕಗೊಂಡ ಮೇಲೆ ಉಪಗ್ರಹ ಯಂತ್ರ ಸಹಾಯವಿಲ್ಲದೆ ತನ್ನಷ್ಟಕ್ಕೆ ತಾನೇ ಭೂಮಿಯ ಸುತ್ತ ಅವಿಚ್ಛಿನ್ನವಾಗಿ ಪರಿಭ್ರಮಿಸತೊಡಗುವುದು. ಇಂಥ ಯಂತ್ರರಹಿತ ಚಲನೆ ಸಾಧ್ಯವಾಗಲು ಕಾರಣ ಆ ಉಪಗ್ರಹ ನಿರ್ವಾತಪ್ರದೇಶದಲ್ಲಿ ಸಂಚರಿಸುವಾಗ ಯಾವ ಗಮನಾರ್ಹ ಘರ್ಷಣೆ-ಪ್ರತಿರೋಧಗಳಿಗೆ ಸಿಲುಕದಿರುವುದೇ. ಅಲ್ಲದೆ ಉಪಗ್ರಹಕ್ಕೆ ಈ ರೀತಿಯಲ್ಲಿ ಲಭಿಸುವ ಸುದೀರ್ಘವಾದ ವೇಗಪೂರ್ಣ ಚರಸ್ಥಿತಿ ಅದನ್ನು ಭೂಮೇಲ್ಮೈಗೆ ಕೂಡಲೇ ಬಿದ್ದುಹೋಗದಂತೆ ರಕ್ಷಿಸುವುದು. ತಕ್ಕಮಟ್ಟಿಗೆ ನುಣುಪಾಗಿರುವ ಬಾಣಲೆಯೊಂದರಲ್ಲಿ ಆಸರೆಯಿಲ್ಲದೆ ನಿಶ್ಚಲವಾಗಿರಿಸಿದ ಗೋಲಿಯು ಆ ಬಾಣಲೆಯ ತಳಭಾಗದೆಡೆಗೆ ಜಾರಲಾರಂಭಿ ಸುತ್ತದೆ. ಆದರೆ ಹಾಗೆ ನಿಶ್ಚಲವಾಗಿರಿಸುವ ಬದಲು ಬಾಣಲೆಯೊಳಗಡೆ ಚಿಮ್ಮಿ ಬಿಟ್ಟಾಗ ಅದೇ ಗೋಲಿ ಸ್ವಲ್ಪಕಾಲ ತಳಭಾಗದ ಸುತ್ತ ನಿರ್ದಿಷ್ಟ ಹಾದಿಯಲ್ಲಿ ಪ್ರದಕ್ಷಿಣೆ ಹಾಕುವುದೇ ವಿನಾ ಕೂಡಲೇ ಅಲ್ಲಿಗೆ ಜಾರಿಹೋಗುವುದಿಲ್ಲ. ಗೋಲಿಯ ಚಲನೆಗೆ ಒಂದು ಪಕ್ಷ ಬಾಣಲೆ ಯಾವ ಪ್ರತಿರೋಧವನ್ನೂ ಒಡ್ಡದಿದ್ದಲ್ಲಿ ಅದರೊಳಗಡೆ ಗೋಲಿ ಶಾತ್ವತವಾಗಿ ಸುತ್ತಾಡುತ್ತಲೇ ಇರುತ್ತಿತ್ತೆಂದು ಹೇಳಬಹುದು. 
ನಿರ್ವಾತ ಭೂ ಗುರುತ್ವಾಕರ್ಷಣ ಕ್ಷೇತ್ರದಲ್ಲಿ ಜರುಗುವ ಉಪಗ್ರಹಗಳ ಚಲನೆ ಇಂಥ ಆದರ್ಶೀಕೃತ ಬಾಣಲೆಯೊಳಗಿನ ಗೋಲಿಯ ಚಲನೆಯನ್ನು ಹೋಲುವುದು. ಈ ಸಾದೃಶ್ಯವನ್ನು ಮತ್ತಷ್ಟು ಪುಷ್ಟೀಕರಿಸಬೇಕಿದ್ದಲ್ಲಿ ಸಾಧಾರಣ ಬಾಣಲೆಯ ಬದಲು ಚಿತ್ರ ೨ರ ಬಲಭಾಗದಲ್ಲಿ ತೋರಿಸಿರುವ ವಿಶೇಷ ಆಕೃತಿಯ ಬಾಣಲೆಯೊಂದರೊಳಗೆ ಗೋಲಿಯನ್ನು ಚಿಮ್ಮಿಬಿಡಲಾಗಿದೆಯೆಂದು ಭಾವಿಸಬಹುದು. ಒಂದು ಲಂಬೀಯ ಹೈಪರ್ಬೊಲದ (ರೆಕ್ಟ್ಯಾಂಗ್ಯುಲರ್ ಹೈಪರ್ಬೊಲ) ವಕ್ರರೇಖೆಯ ಕಂಸವನ್ನು ಅದರ ಅನಂತಸ್ಪರ್ಶಿಯೊಂದರ (ಅಸಿಮ್ಟೋಟ್) ಮೇಲೆ ಪರಿಭ್ರಮಿಸಿದಾಗ ಈ ಆಕೃತಿ ಜನಿಸುತ್ತದೆ. ಚಿಮ್ಮಿಬಿಟ್ಟು ಗೋಲಿಯ ಚಲನೆಯ ಸಂಬಂಧದಲ್ಲಿ ಇದು ಭೂಗುರುತ್ವಾಕರ್ಷಣಕ್ಷೇತ್ರದ ಲಕ್ಷಣಗಳನ್ನು ಸರಿಸುಮಾರಾಗಿ ಪ್ರತಿಬಿಂಬಿಸುತ್ತದೆ. ಈ ಮಾದರಿಯ ಉಪಕರಣದಲ್ಲಿ ಬೇರೆ ಬೇರೆ ವೇಗಗಳಿಂದ ಗೋಲಿಯನ್ನು ಚಿಮ್ಮಿಬಿಟ್ಟು ಉಪಗ್ರಹ ಮುಂತಾದ ಯಂತ್ರರಹಿತ ಅಂತರಿಕ್ಷವಾಹನಗಳಿಗೆ ಪ್ರಾಪ್ತವಾಗಬಹುದಾದ ಪಥಗಳ ವೈವಿಧ್ಯವನ್ನು ಸ್ಥೂಲವಾಗಿ ಪ್ರದರ್ಶಿಸಬಹುದು. ಆ ಪಥಗಳು ವೃತ್ತ, ದೀರ್ಘವೃತ್ತ, ಪ್ಯಾರಬೊಲ ಅಥವಾ ಹೈಪರ್ಬೊಲ ಆಕಾರದಲ್ಲಿರುತ್ತವೆ.
ನಿರ್ವಾತ ಭೂಗುರುತ್ವಕ್ಷೇತ್ರದಲ್ಲಿ ಯಂತ್ರಕ್ರಿಯೆಯಿಲ್ಲದೆ ಸಂಚರಿಸುವ ವಾಹನಗಳ ಚಲನಕ್ರಮಗಳನ್ನು ನೇರ ಗಣಿತ ವಿಧಾನದ ಮೂಲಕ ಕೆಳಗೆ ಕಂಡಂತೆ ವಿಮರ್ಶಿಸಬಹುದು. ಎಲ್ಲೆಡೆಗಳಲ್ಲಿಯೂ ಒಂದೇ ಸಾಂದ್ರತೆಯಿರುವ ಏಕಕೇಂದ್ರೀಯವಾದ (ಕಾನ್ಸೆಂಟ್ರಿಕ್) ಅನೇಕ ಪರಿಪೂರ್ಣ ಗೋಲಾಕೃತಿಯ ಸ್ತರಗಳಿಂದ ಭೂಮಿ ರಚಿತವಾಗಿದೆಯೆಂದು ಭಾವಿಸೋಣ. ಆಗ ಅದರ ಆಕರ್ಷಣೆಯ ಫಲವಾಗಿ ವಾಹನದ ವೇಗೋತ್ಕರ್ಷ ಸದಾ ಕಾಲದಲ್ಲಿಯೂ ನಿಖರವಾಗಿ ಭೂ ಕೇಂದ್ರದೆಡೆಗೇ ಏರ್ಪಡುವುದು. ಈ ಪರಿಸ್ಥಿತಿಯಲ್ಲಿ ವಾಹನದ ಚಲನೆ ಭೂ ಕೇಂದ್ರದಿಂದ ವೀಕ್ಷಿಸಿದಾಗ ದೂರದ ನಕ್ಷತ್ರಗಳ ಹಿನ್ನೆಲೆಯಲ್ಲಿ ಸ್ಥಿರವಾದ ನಿಲುವನ್ನು ತಾಳುವ ಒಂದು ನಿರ್ದಿಷ್ಟ ತಳಕ್ಕಷ್ಟೇ ಸೀಮಿತವಾಗುತ್ತದೆ, ಈ ಸ್ಥಿರ ತಳದಲ್ಲಿ ಅ ಭೂಕೇಂದ್ರವೂ ಅಂ ಯಾವುದಾದರೊಂದು ಸ್ಥಿರ ಸದಿಶರೇಖೆಯೂ ಹಾಗೂ ಃ ವಾಹನದ ಯಾವುದಾದರೊಂದು ಕ್ಷಣಿಕ ಸ್ಥಾನವೂ ಆಗಿರಲಿ ಚಿತ್ರ. ಇದೇ ತಲದಲ್ಲಿ ಖ ಮತ್ತು P ಎಂಬ ಚರ ಏಕಮಾನ (ಸದಿಶಗಳನ್ನು ವೇರಿಯಬಲ್ ಯೂನಿಟ್ ವೆಕ್ಟರ್ಸ್‌) ಕ್ರಮವಾಗಿ ಃಅ ಮತ್ತು ಃಅ ಗೆ ಲಂಬವಾಗಿರುವ ನೇರಗಳಲ್ಲಿ ಎಳೆದು ವಾಹನ ಃ ಸ್ಥಾನವನ್ನು ತಲಪಿದ ಕಾಲವನ್ನು ಣ, ಃಅ ರೇಖೆಯ ಉದ್ದ ಡಿ, ಂಃಅ ಕೋನ. ಭೂಮಿಯ ತೂಕ ಒ, ಸಾರ್ವತ್ರಿಕ ಗುರುತ್ವಾಕರ್ಷಣ ನಿಯತಾಂಕ ಉ ಎಂದು ನಿರ್ದೇಶಿಸೋಣ.  
ಈಗ ಃ ಯಲ್ಲಿರುವ ವಾಹನದ ಭೂಸಾಪೇಕ್ಷ ವೇಗೋತ್ಕರ್ಷ ನ್ಯೂಟನ್ನನ ಗುರುತ್ವಾ ಕರ್ಷಣ ನಿಯಮದ ಮೇರೆಗೆ  ಎಂಬ (ಸದಿಶ) ಮೌಲ್ಯಕ್ಕೂ ಗತಿಶಾಸ್ತ್ರ ಸೂತ್ರಗಳ ಮೇರೆಗೆ  ಎಂಬ ಮೌಲ್ಯಕ್ಕೂ ಸಮವಾಗಬೇಕು. ಇವೆರಡು ಮೌಲ್ಯಗಳನ್ನು ಸಮೀಕರಿಸಿದಾಗ P ಯ ಸಹಗುಣಕ (ಕೋಎಫಿಷಂಟ್) ಶೂನ್ಯವಾಗಿ ಪರಿಣಮಿಸಿಒಂದು ನಿಯತಮೌಲ್ಯ ವೆಂಬ ಅಂಶ ಸ್ಥಾಪಿತವಾಗುತ್ತದೆ. ಈ ನಿಯತಮೌಲ್ಯವನ್ನು h ಎಂದೂ ಎಂದೂ ಬರೆದರೆ ಮೇಲಿನ ಸದಿಶೋಕ್ತಿಗಳಲ್ಲಿ ಖ ನ ಸಹ ಗುಣಕಗಳನ್ನು ಕ್ರಮವಾಗಿ ಉಒu೨ ಮತ್ತು ಎಂಬುದಾಗಿ ರೂಪಾಂತರಿಸಲು ಸಾಧ್ಯವಾಗುವುದು. ಅಂತಿಮವಾಗಿ ಈಗ ಇವೆರಡನ್ನೂ ಸಮೀಕರಿಸಿ ರಚಿಸಬಹುದಾದ 

ಎಂಬ ಅವಕಲನ ಸಮೀಕರಣವನ್ನು (ಡಿಫರೆನ್ಷಿಯಲ್ ಈಕ್ವೇಷನ್) ನಾವು ಬಿಡಿಸಿದರೆ

ಎಂದು ವ್ಯಕ್ತವಾಗುವುದು: ಇಲ್ಲಿ e ಹಾಗೂ ಚಿ ಗಳು ನಿಯತಾಂಕಗಳು. ಈ ಕೊನೆಯ ಸಮೀಕರಣ ಉತ್ಕೇಂದ್ರತೆ e ಮತ್ತು ನಾಭೀಲಂಬ (ಲೇಟಸ್ ರೆಕ್ಟಂ)  ಇರುವ ದೀರ್ಘವೃತ್ತ, ಪ್ಯಾರಬೊಲ ಅಥವಾ ಹೈಪರ್ಬೊಲ ಮಾರ್ಗವಾಗಿ ವಾಹನ ಚಲಿಸುವುದೆಂದು ನಮಗೆ ತಿಳಿಸುತ್ತದೆ. ಅಲ್ಲದೆ ಇದಾವುದೇ ಪಥದ ನಾಭಿ (ಫೋಕಸ್) ಭೂಕೇಂದ್ರ ಅ ಯಲ್ಲಿರಬೇಕಾಗುವುದು. ವಾಹನ ಚಲಿಸುವಾಗ ಗತಿಶಾಸ್ತ್ರ ಸೂತ್ರಗಳ ಪ್ರಕಾರ ಃ ಸ್ಥಾನದಲ್ಲಿ ಆದರೆ ವೇಗ ಎಂಬ ಸದಿಶಮೌಲ್ಯಕ್ಕೆ ಸಮವಾಗಿರ ಬೇಕಾಗುವುದು. ಪ್ರಸಕ್ತ ಸನ್ನವೇಶದಲ್ಲಿ ಈ ವೇಗ ಸದಿಶವನ್ನು  ಎಂದು ರೂಪಾಂತರಿಸಿಕೊಂಡು ಅದರ ಪರಿಮಾಣ v ಯ ವರ್ಗವನ್ನು ಕೆಳಗಿನಂತೆ ಲೆಕ್ಕಹಾಕಿ ಸಂಕ್ಷೇಪಿಸಬಹುದು:

 ನಲ್ಲಿ ಇದನ್ನು ಬಿಡಿಸಿದಾಗ
   
ಎಂದಾಗುತ್ತದೆ. ಈಗ ವಾಹನ ಒಂದು ಪ್ಯರಾಬೊಲ ಮಾರ್ಗವಾಗಿ ಸಂಚರಿಸಬೇಕಾದಲ್ಲಿ ಅಂಥ ಯಾವುದೇ ಪರ್ಯಾಬೊಲದ ಉತ್ಕೇಂದ್ರತೆ e=೧ ಆದ್ದರಿಂದ ಆ ವಾಹನದ ವೇಗಪರಿ ಮಾಣ ಪ್ರತಿ ಸ್ಥಾನದಲ್ಲೂ  ಎಂಬ ನಿರ್ದಿಷ್ಟ (ಚರ) ಮೌಲ್ಯಕ್ಕೆ ಸಮವಾಗಿರಬೇಕಾಗು ವುದು. ಈ ಕಾರಣಕ್ಕಾಗಿ  ವನ್ನು ಆಯಾ ಸ್ಥಾನದ ಪ್ಯಾರಬೊಲೀಯ ವೇಗವೆಂದು (ಪರ್ಯೊಬೊಲಿಕ್ ಸ್ಪೀಡ್) ಕರೆಯುತ್ತಾರೆ. ೧/u ಎಂಬುದು ಭೂಕೇಂದ್ರದಿಂದ ವಾಹನಸ್ಥಾನಕ್ಕಿ ರುವ ದೂರವನ್ನು ಸೂಚಿಸುತ್ತದೆಂಬುದನ್ನು ನೆನಪಿಡುವುದು ಅಗತ್ಯ, ರಾಕೆಟ್ಯಂತ್ರಗಳು ವಾಹನವನ್ನು ಃ ಸ್ಥಾನಕ್ಕೆ ಕೊಂಡೊಯ್ದು ಅಲ್ಲಿ ಆ ಸ್ಥಾನಕ್ಕೆ ಅನ್ವಯಿಸುವ ಪರ್ಯಾಬೊಲೀಯ ವೇಗದಿಂದ ಬಿಡುಗಡೆ ಮಾಡಿದರೆ ಆ ತರುವಾಯು ಅದು ಒಂದು ಪರ್ಯಾಬೊಲ ಪಥದಲ್ಲಿ ಯಂತ್ರ ಕ್ರಿಯೆಯಿಲ್ಲದೆ ಸಂಚರಿಸತೊಡಗುವುದು. ಭೂಮೇಲ್ಮೈಯ ಸಮೀಪದಲ್ಲಿ ಪರ್ಯಾ ಬೊಲೀಯ ವೇಗಪರಿಮಾಣ ಸೆಕೆಂಡಿಗೆ ಸುಮಾರು ೧೧ ಕಿಮೀ.ಗಳಷ್ಟಾಗುತ್ತದೆ. ರಾಕೆಟ್ಯಂತ್ರಗ ಳಿಂದ ಬಿಡುಗಡೆಯಾದಾಗ ವಾಹನ ಆ ಸ್ಥಾನಕ್ಕೆ ಅನ್ವಯಿಸುವ ಪರ್ಯಾಬೊಲೀಯ ವೇಗಕ್ಕಿಂತ ಹೆಚ್ಚಿನ ವೇಗದಿಂದ ಚಲಿಸುತ್ತಿದ್ದಲ್ಲಿ ಮೇಲಿನ ಸಮೀಕರಣದಂತೆ e>೧ ಆಗುವುದರಿಂದ ವಾಹನಕ್ಕೆ ಪ್ರಾಪ್ತವಾಗುವ ಪಥ ಹೈಪರ್ಬೊಲಾ ಕಾರವನ್ನು ತಾಳುವುದು. ಪ್ಯಾರಾಬೊಲ, ಹೈಪರಾಬೊಲಗಳು ಸಂವೃತ (ಕ್ಲೋಸ್óಡ್), ವಕ್ರರೇಖೆಗಳಲ್ಲದ ಕಾರಣ ಪ್ಯಾರಬೊಲೀಯವೇಗ ಅಥವಾ ಅದಕ್ಕೂ ಹೆಚ್ಚಿನ ವೇಗಗಳಿಂದ ಬಿಡುಗಡೆಯಾದ ವಾಹನಗಳು ಭೂಮಿಯ ಸುತ್ತ ಪರಿಭ್ರಮಿಸುವ ಉಪಗ್ರಹಗಳಾಗಲಿ ಸಾಧ್ಯವಿಲ್ಲ. ಅಂಥ ವಾಹನಗಳು ಭೂಪರಿಸರದಿಂದ ತಪ್ಪಿಸಿಕೊಂಡು ಅನಿರ್ದಿಷ್ಟವಾಗಿ ದೂರಸರಿಯುತ್ತ ಹೋಗುವುದರಿಂದ ಪ್ಯಾರಾಬೊಲೀಯ ವೇಗವನ್ನು ವಿಮೋಚನವೇಗವೆಂದೂ (ಎಸ್ಕೇಪ್ ವೆಲಾಸಿಟಿ) ಕರೆಯುವುದುಂಟು. ಅಂತರಿಕ್ಷ ವಾಹನವೊಂದನ್ನು ಭೂಉಪಗ್ರಹವನ್ನಾಗಿ ಸ್ಥಾಪಿಸಲು ಅದನ್ನು ಪ್ಯಾರಬೊಲೀಯ ವೇಗಕ್ಕಿಂತ ಕಡಿಮೆವೇಗದಲ್ಲಿ ಬಿಡುಗಡೆ ಮಾಡಬೇಕು. ಆಗ ಮೇಲಿನ ಸಮೀಕರಣದ ಪ್ರಕಾರ e<೧ ಆಗುವುದರಿಂದ ವಾಹನಕ್ಕೆ ದೀರ್ಘ ವೃತ್ತಾಕಾರದ ಸಂವೃತ ಪಥ ಲಭಿಸುತ್ತದೆ. ಇಂಥ ಸಂವೃತ ಪರಿಭ್ರಮಣ ಪಥಕ್ಕೆ ಕಕ್ಷೆ (ಆರ್ಬಿಟ್) ಎಂದು ಹೆಸರು. ಎಲ್ಲ ವಿಶ್ಲೇಷಣೆ ನಿರ್ವಾತ ಭೂಗುರುತ್ವಕ್ಷೇತ್ರಕ್ಕೆ ಸರಿ ಹೊಂದುವುದೇ ವಿನಾ ವಾಯುಮಂಡಲದೊಳಗಿನ ಪ್ರದೇಶಗಳಿಗಲ್ಲ. ಆದ್ದರಿಂದ ಇಲ್ಲಿ ಸೂಚಿಸಿರುವ ಲೆಕ್ಕಾಚಾರದ ಮೇರೆಗೆ ನಿರ್ಧರಿಸಿದ ಕಕ್ಷೆಯ ಯಾವುದಾದ ರೊಂದು ಭಾಗ ಭೂ ವಾಯುಮಂಡಲದೊಳಗಿದ್ದಲ್ಲಿ ಆ ಕಕ್ಷೆಯ ಮೇಲೆ ಚಲಿಸತೊಡಗ ಬಹುದಾದ ಉಪಗ್ರಹದ ಚಲನೆ ಈ ಲೆಕ್ಕಾಚಾರದಿಂದ ತೀರಭಿನ್ನವಾಗುತ್ತ ಬಂದು ವಾಯುಸಂಘರ್ಷದ ಫಲವಾಗಿ ಅಂಥ ಉಪಗ್ರಹ ಬಹುಬೇಗ ನಾಶವಾಗುವುದು. 
ಉಪಗ್ರಹವೊಂದನ್ನು ರಾಕೆಟ್ಯಂತ್ರಗಳು ಭೂವಾಯುಮಂಡಲದಾಚೆ ಂ ಎಂಬಲ್ಲಿಗೆ ಒಯ್ದು (ಚಿತ್ರ ೩)ಅಲ್ಲಿ ಂಆ ನೇರದಲ್ಲಿ ಪ್ಯಾರಬೊಲೀಯ ವೇಗದ ೧/ಞ ನಷ್ಟು ವೇಗಪರಿಮಾಣದೊಡನೆ ಬಿಡುಗಡೆ ಮಾಡಲಿ. ಅಂದರೆ ಂಅ ಯ ಉದ್ದ  ಎಂದು ನಾವು ಇಟ್ಟುಕೊಂಡಲ್ಲಿ ವಾಹನ ಬಿಡುಗಡೆಯಾಗುವ ವೇಗ ಆಗುವುದು. ಈ ಪರಿಸ್ಥಿತಿಯಲ್ಲಿ  ಎಂದು ಬರೆದರೆ  ಆಗುತ್ತದೆಂದು ತೋರಿಸಬಹುದು. ಆದ್ದರಿಂದ ಮೇಲಿನ (೧)ಮತ್ತು (೨) ಸಮೀಕರಣಗಳಲ್ಲಿ ಎಂಬ ಆದಿಮೌಲ್ಯಗಳನ್ನೂ ಈಗ ತಿಳಿಸಿದ  ಮೌಲ್ಯವನ್ನೂ ಆದೇಶಿಸಿ ಅಜ್ಞಾತ ಕಕ್ಷಾ ಪ್ರಾಚಲಗಳಾದ (ಅನ್ನೋನ್ ಆರ್ಬಿಟಲ್ ಪ್ಯರಾಮೀಟರ್ಸ್‌) e ಮತ್ತುಗಳನ್ನು ಕಂಡುಹಿಡಿಯಬಹುದು. ಸಾಮಾನ್ಯವಾಗಿ ಉಪಗ್ರಹಗಳನ್ನು ಭೂಕೇಂದ್ರದಿಸೆಗೆ ಲಂಬವಾಗಿ ಬಿಡುಗಡೆ ಮಾಡುವುದರಿಂದ ಹೆಚ್ಚಿನ ಅನುಕೂಲಗಳು ಲಭಿಸುತ್ತವೆ. ವ್ಯಾವಹಾರಿಕ ಪ್ರಾಧಾನ್ಯವುಳ್ಳ ಈ ವಿಶೇಷ ಸಂದರ್ಭದಲ್ಲಿ  ಮತ್ತು  ಆಗಿ ಪರಿಣಮಿಸಿ ಮೇಲೆ ಸೂಚಿಸಿದ ಮೌಲ್ಯಾದೇಶಗಳ ಬಳಿಕ ನಮಗೆ (೧) ಮತ್ತು (೨) ಸಮೀಕರಣಗಳಿಂದ ಕ್ರಮವಾಗಿ
 ಮತ್ತು 
ಎಂಬ ಮಾಹಿತಿಗಳು ದೊರಕುತ್ತವೆ, ಈಗ ಆದಲ್ಲಿ ಉತ್ಕೇಂದ್ರತೆ e ಶೂನ್ಯವಾಗಿ ಪರಿಣಮಿಸಿ ಉಪಗ್ರಹದ ಕಕ್ಷೆ ಒಂದು ಪರಿಪೂರ್ಣ ವೃತ್ತವಾಗುವುದು. ಈ ಕಾರಣದಿಂದ ಪರ್ಯಾಬೊಲೀಯ ವೇಗದರಷ್ಟು ವೇಗವನ್ನು ವರ್ತುಲ ವೇಗ (ಸಕುರ್ಯ್‌ಲರ್ ವೆಲಾಸಿಟಿ) ಎಂದು ಕರೆಯುತ್ತಾರೆ. ಭೂಮೇಲ್ಮೈಯ ಸಮೀಪದಲ್ಲಿ ವರ್ತುಲವೇಗದ ಪರಿಮಾಣ ಸೆಕೆಂಡಿಗೆ ಸುಮಾರು ೮ಕಿ.ಮೀ. ಹೆಚ್ಚು ಎತ್ತರಕ್ಕೆ ಹೋದಂತೆಲ್ಲ ಈ ಪರಿಮಾಣ ಕಡಿಮೆಯಾಗು ತ್ತದೆ. ಉಪಗ್ರಹವೊಂದನ್ನು ಭೂ ಕೇಂದ್ರದಿಸೆಗೆ ಲಂಬವಾಗಿ ವರ್ತುಲವೇಗಕ್ಕಿಂತ ಹೆಚ್ಚಿನ ವೇಗದಿಂದ  ಬಿಡುಗಡೆ ಮಾಡಿದಲ್ಲಿಮತ್ತು ಆಗಿ ಉಪಗ್ರಹ ಬಿಡುಗಡೆಯಾದ ಸ್ಥಾನ ಫಲಿಸುವ ಕಕ್ಷೆಯಲ್ಲಿ ಭೂಕೇಂದ್ರಕ್ಕೆ ಅತ್ಯಂತ ಸಮೀಪವಾದ ಬಿಂದುವಾಗುತ್ತದೆ (ನೀಚಬಿಂದು). ಬದಲು, ಅದನ್ನು ಹಾಗೆ ಬಿಡುಗಡೆ ಮಾಡಿದ ವೇಗ ವರ್ತುಲವೇಗಕ್ಕಿಂತ ಕಡಿಮೆಯಾದಲ್ಲಿ ಉಪಗ್ರಹ ಬಿಡುಗಡೆಯಾದ ಸ್ಥಾನ ಕಕ್ಷೆಯಲ್ಲಿ ಭೂಕೇಂದ್ರಕ್ಕೆ ಅತ್ಯಂತ ದೂರವಾದ ಬಿಂದುವಾಗುತ್ತದೆ (ಉಚ್ಚಬಿಂದು).
ಈ ಕೊನೆಯ ಪ್ರಸಂಗದಲ್ಲಿ ಉಪಗ್ರಹ ಭೂಕೇಂದ್ರದ ಸುತ್ತ ಪರಿಭ್ರಮಿಸುವಾಗ ಪದೇ ಪದೇ ವಾಯುಮಂಡಲದ ಮೂಲಕ ಹಾದುಹೋಗುವ (ಅಥವಾ ಇನ್ನೂ ಅಧಮ ಪರಿಸ್ಥಿತಿಯಲ್ಲಿ ಘನ ಭೂಮಿಗೇ ಡಿಕ್ಕಿ ಹೊಡೆಯುವ) ಸಂಭವವಿರುವುದರಿಂದ ಹಾಗಾಗದಂತೆ ಎಚ್ಚರವಹಿಸುವುದು ಆವಶ್ಯಕ: ಇದಕ್ಕಾಗಿ ಬಿಡುಗಡೆಯಾದಾಗ ಉಪಗ್ರಹಕ್ಕೆ ಪ್ರಾಪ್ತವಾಗಿರುವ ವೇಗ ವರ್ತುಲವೇಗಕ್ಕಿಂತ ತೀರ ಕಡಿಮೆಯಾಗಿರದಂತೆ ನೋಡಿಕೊಳ್ಳಬೇಕಾಗುವುದು. ಬೇರೆಬೇರೆ ವೇಗಗಳಿಂದ ಭೂಕೇಂದ್ರ ದಿಸೆಗೆ ಲಂಬನೇರದಲ್ಲಿ ಬಿಡುಗಡೆಯಾಗುವ ಅಂತರಿಕ್ಷ ವಾಹನಗಳಿಗೆ ಲಭಿಸಲು ಸಾಧ್ಯವಿರುವ ಪಥಗಳ ವಿನ್ಯಾಸವನ್ನು ಚಿತ್ರ ೪ರಲ್ಲಿ ತೋರಿಸಲಾಗಿದೆ. ಇಂಥ ಪಥವೊಂದು ಸಂವೃತ ಕಕ್ಷೆಯಾದಾಗ ಮತ್ತು  ಗಳ ಪೈಕಿ ಅಧಿಕತರವಾದದ್ದು ಭೂಕೇಂದ್ರದಿಂದ ಕಕ್ಷೆಯ ಉಚ್ಚಬಿಂದುವಿನ ದೂರವನ್ನೂ ಚಿಕ್ಕದಾದದ್ದು ನೀಚಬಿಂದುವಿನ ದೂರವನ್ನೂ ವ್ಯಕ್ತಪಡಿಸುತ್ತವೆ; ಆ ಕಕ್ಷೆಯಲ್ಲಿ ಸಂಚರಿಸುವ ಉಪಗ್ರಹದ ಪರಿಭ್ರಮಣಾವಧಿ ದಷ್ಟು ಇರುತ್ತದೆಂದು ತೋರಿಸ ಬಹುದು.
ಮೇಲಿನ ಲೆಕ್ಕಾಚಾರಗಳೆಲ್ಲ ಕೆ¯ ಆದರ್ಶೀಕೃತ ಸನ್ನಿವೇಶಗಳನ್ನು ಆಶ್ರಯಿಸಿ ಮಾಡಿದಂಥ ವೆಂಬುದನ್ನು ಮರೆಯಬಾರದು. ವಾಸ್ತವಿಕವಾಗಿ ಎಲ್ಲ ಉಪಗ್ರಹಗಳ ಕಕ್ಷೆಗಳನ್ನು ಕಾಲಕ್ರಮೇಣ ಸ್ವಲ್ಪಸ್ವಲ್ಪವಾಗಿ ಪಲ್ಲಟಗೊಳಿಸುತ್ತ ಹೋಗುವ ಅನೇಕ ಪ್ರಭಾವಗಳನ್ನು (ಪರ್ಟರ್ಬಿಂಗ್ ಫೋರ್ಸಸ್) ಆಕಾಶವಿಜ್ಞಾನಿಗಳು ಗಣನೆಗೆ ತೆಗೆದುಕೊಳ್ಳಬೇಕಾಗುವುದು. ಭೂಮಿಯ ಆಕೃತಿಗೂ ಪರಿಪೂರ್ಣ ಗೋಳಕ್ಕೂ ಇರುವ ಅಂತರ, ಭೂಮಿಯ ಸಾಂದ್ರತೆಯಲ್ಲಿನ ಏರುಪೇರುಗಳು, ಎಷ್ಟೇ ಇಲ್ಲವೆಂದರೂ ಸ್ವಲ್ಪಮಟ್ಟಿಗೆ ಕಾಣಿಸಿಕೊಳ್ಳುವ ವಾಯುಪ್ರತಿರೋಧ, ಸೂರ್ಯರಶ್ಮಿ ಉಪಗ್ರಹದ ಮೇಲೆ ಬೀರುವ ಸಂಮರ್ದಬಲ, ಸೂರ್ಯಚಂದ್ರರ ಗುರುತ್ವಾ ಕರ್ಷಣೆ-ಇವು ಅಂಥ ಪಲ್ಲಟಕಾರಿ ಪ್ರಭಾವಗಳಲ್ಲಿ ಮುಖ್ಯವಾದವು. ಆದರೆ ಇವನ್ನು ಕುರಿತ ಚರ್ಚೆ ಪ್ರಸಕ್ತ ಲೇಖನದ ವ್ಯಾಪ್ತಿಯಲ್ಲಿ ಸಾಧ್ಯವಿಲ್ಲ.
ಯಂತ್ರಕ್ರಿಯೆ ಮತ್ತು ಗಿರಕಿ (ಸ್ಪಿನ್) ಚಲನೆಗಳಿಲ್ಲದೆ. ಬಾಹ್ಯಾಂತರಿಕ್ಷದಲ್ಲಿ ಸಂಚರಿಸುವ ವಾಹನಗಳಲ್ಲಿರುವ ವ್ಯವಸ್ಥೆಗಳು ತೂಕರಹಿತ (ವೇಟ್ ಲೆಸ್) ಸ್ಥಿತಿಯಲ್ಲಿರುತ್ತವೆ. ವಾಹನ ಗಣನಾರ್ಹ ದ್ರವ್ಯರಾಶಿಯನ್ನೇನೂ ಒಳಗೊಳ್ಳದ ಕಾರಣ ಅದರ ಬೇರೆ ಬೇರೆ ತೂಕಗಳ ನಡುವಿನ ಗುರುತ್ವಾಕರ್ಷಣ ಬಲಗಳು ತೀರಾ ಉಪೇಕ್ಷಣೀಯ. ಇನ್ನು ಸೂರ್ಯ ಭೂಮಿ ಮುಂತಾದ ಬೃಹತ್ಕಾಯಗಳು ಸೃಷ್ಟಿಸಿರುವ ಪ್ರಬಲಬಾಹ್ಯ ಗುರುತ್ವಾಕರ್ಷಣ ಕ್ಷೇತ್ರದಲ್ಲಿ ಇವೆಲ್ಲ ಭಾಗಗಳೂ ಒಂದೇ ವೇಗೋತ್ಕರ್ಷಣವನ್ನು ಗಳಿಸುವುದರಿಂದ ಅವುಗಳ ನಡುವೆ ಯಾವ ಸಾಪೇಕ್ಷ ವೇಗೋತ್ಕರ್ಷವೂ ಉಳಿಯುವುದಿಲ್ಲ. ಆದ್ದರಿಂದ ವಾಹನಭಾಗಗಳ ಪೈಕಿ ಒಂದೊಂದರ ಮೇಲೆ ವರ್ತಿಸುತ್ತಿರುವ ಬಾಹ್ಯ ಗುರುತ್ವಾಕರ್ಷಣಬಲವೂ ವಾಹನದ ಇತರ ಭಾಗಗಳಿಗೆ ಸಾಪೇಕ್ಷವಾಗಿ ಅಗೋಚರವೇ ಆಗಿ ಪರಿಣಮಿಸುವುದು. ವಾಹನಭಾಗಗಳ ತೂಕರಹಿತ ಸ್ಥಿತಿಗೆ ಈ ಪರಿಸ್ಥಿತಿ ಕಾರಣವೇ ವಿನಾ ಸೂರ್ಯ ಭೂಮಿ ಮುಂತಾದ ಕಾಯಗಳಿಂದ ಅವುಗಳ ಗುರುತ್ವಾಕರ್ಷಣೆ ಉಪೇಕ್ಷಣೀಯವಾಗುವಷ್ಟು ದೂರಕ್ಕೆ ವಾಹನ ಸರಿದು ಹೋಗಿರುತ್ತದೆಂದಾಗಲೀ ಅಂಥ ಕಾಯಗಳ ಗುರುತ್ವ ಬಲಗಳು. ಸರಿದು ಹೋಗಿರುತ್ತದೆ. ವಾಹನದ ಬಳಿ ಪರಸ್ಪರ ರದ್ದುಗೊಂಡಿರುತ್ತವೆಂದಾಗಲೀ ಭಾವಿಸಬಾರದು. (ಹಾಗಾಗಿದ್ದಲ್ಲಿ ವಾಹನದ ಪಥ ನ್ಯೂಟನ್ನನ ಪ್ರಥಮ ಚಲನನಿಯಮದ ಮೇರೆಗೆ ಒಂದು ಸರಳ ರೇಖೆಯಾಗಿರುತ್ತಿತ್ತು) ಈ ವಿಶ್ಲೇಷಣೆಯಿಂದ ಪ್ರಕಾಶಕ್ಕೆ ಬರುವ ಒಂದು ಮುಖ್ಯ ಅನುಮಿತ ನ್ಯೂಟನ್ನನ ಚಲನನಿಯಮಗಳಿಗೆ ಸರಿಹೊಂದುವ ವೀಕ್ಷಣ ಚೌಕಟ್ಟಿನಲ್ಲಿ ಕಾಯವೊಂದರ ತೂಕ ಸಾರ್ವತ್ರಿಕವಾಗಿ ಆ ಕಾಯದ ಮೇಲೆ ವರ್ತಿಸುವ ಗುರುತ್ವಬಲಗಳ ಮೊತ್ತಕ್ಕೆ ಸಮವಾಗಿರಬೇಕಿಲ್ಲ ಎಂಬುದು. ತದ್ವಿರುದ್ಥವಾಗಿ ಈ ತೂಕ ಅದನ್ನಳೆಯುವ ವ್ಯವಸ್ಥೆಯ ಮೇಲೆ ಕಾಯ ಪ್ರಯೋಗಿಸುವ ಬಲದ ಅಳತೆಯಾಗಿದ್ದು ನಿಜಕ್ಕೂ ಅದರ ಸ್ವರೂಪ ಗುರುತ್ವೇತರವೇ ಆಗಿರುತ್ತದೆ. ಗಿರಕಿ ಚಲನೆಯಿರುವ ಯಂತ್ರರಹಿತ ವಾಹನಗಳ ಒಳಗಡೆಯಲ್ಲಿ ಕಾಯಗಳು ಕೇಂದ್ರಾಭಿಗಾಮಿ ಬಲಕ್ಕೆ (ಸೆಂಟ್ರಿಪೀಟಲ್ ಫೋರ್ಸ್) ಗುರಿಯಾಗುತ್ತವೆ. ಅವುಗಳ ಮೇಲೆ ತೂಕವನ್ನಳೆಯುವ ವ್ಯವಸ್ಥೆಗಳು ಈ ಬಲವನ್ನು ಪ್ರಯೋಗಿಸುವುದರಿಂದ ಕಾಯಗಳೂ ಆ ವ್ಯವಸ್ಥೆಗಳು ಮೇಲೆ ಅಷ್ಟೇ ಬಲವನ್ನು ವಿರುದ್ಥ ದಿಸೆಯಲ್ಲಿ ಪ್ರಯೋಗಿಸಬೇಕಾಗುವುದು. ಆದ್ದರಿಂದಲೇ ಅಂಥ ವಾಹನಗಳೊಳಗೆ ಕಾಯಗಳು ಕೇಂದ್ರಾಪಗಾಮಿ ದಿಸೆಯಲ್ಲಿ ತೂಕವನ್ನು ಗಳಿಸಿಕೊಳ್ಳುತ್ತವೆ.  
ಉಪಗ್ರಹಗಳ ಗತಿವೀಕ್ಷಣೆ: ಉಪಗ್ರಹವೊಂದರಿಂದ ಅಂತರಿಕ್ಷದ ಬಗ್ಗೆ ಮಾಹಿತಿಗಳನ್ನು ಗ್ರಹಿಸಬೇಕಾದರೆ-ಹಾಗೂ ಅದರ ಕಕ್ಷೆಯನ್ನು ಲೆಕ್ಕಹಾಕಬೇಕಾದರೆ-ಅದು ಆಕಾಶದ ಯಾವ ಭಾಗದಲ್ಲಿ ಯಾವ ಮಾರ್ಗವನ್ನುನುಸರಿಸಿ ಚಲಿಸುತ್ತಿದೆಯೆಂದು ಪತ್ತೆ ಹಚ್ಚುವುದು ಆವಶ್ಯಕ. ಈ ಬಗೆಯ ಗತಿವೀಕ್ಷಣೆಯನ್ನು (ಟ್ರ್ಯಾಕಿಂಗ್) ರೇಡಿಯೊ, ರೇಡಾರ್ ಹಾಗೂ ನೇರದೃಶ್ಯ (ಆಪ್ಟಿಕಲ್) ತಂತ್ರಗಳಿಂದ ನಿರ್ವಹಿಸಬಹುದು. ರೇಡಿಯೊ ವೀಕ್ಷಣೆಯ ಒಂದು ವಿಧಾನದಲ್ಲಿ ಉಪಗ್ರಹದೊಳಗೆ ಸಜ್ಜುಗೊಳಿಸಿರುವ ಪ್ರೇಷಕದಿಂದ (ಟ್ರಾನ್ಸ್‌ಮೀಟರ್) ವಿಗಮಿಸಿ ಬಂದು ರೇಡಿಯೊ ತರಂಗಗಳನ್ನು ಅತ್ಯಂತ ಸ್ಫುಟವಾಗಿ ಸ್ವೀಕರಿಸುವಂತೆ ಭೂಮ್ಯಾಧಾರಿತ ಗ್ರಾಹಕಗಳ (ರಿಸೀವರ್ಸ್‌) ಚರಆ್ಯಂಟೆನಗಳನ್ನು ಸೂಕ್ತವಾದ ದಿಕ್ಕಿನೆಡೆಗೆ ತಿರುಗಿಸಬಹುದು. ಇದರಿಂದ ಗೊತ್ತಾದ ಕಾಲದಲ್ಲಿ ಉಪಗ್ರಹವಿರುವ ದಿಕ್ಕನ್ನು ಮಾತ್ರ ನೇರವಾಗಿ ನಿಷ್ಕರ್ಷಿಸಲು ಸಾಧ್ಯವಾಗುವುದು. ರೇಡಿಯೊ ತರಂಗಗಳನ್ನು ಉಪಗ್ರಹದೊಳಗೇ ಉತ್ಪಾದಿಸುವ ಬದಲು ಭೂಮೇಲ್ಮೈಯಲ್ಲಿರುವ ಪ್ರೇಷಕಗಳಿಂದ ಉಪಗ್ರಹಕ್ಕೆ ಕಳುಹಿಸಿ ಅಲ್ಲಿಂದ ಪ್ರತಿಫಲನಗೊಂಡು ಹಿಂತಿರುಗುವ ತರಂಗಗಳನ್ನು ಆ ಉಪಗ್ರಹದ ಗತಿವೀಕ್ಷಣೆಗಾಗಿ ಬಳಸಿಕೊಳ್ಳಬಹುದು. ಇದು ಅಂತರಿಕ್ಷವಾಹನಗಳ ರೇಡಾರ್ ವೀಕ್ಷಣವಿಧಾನದ ತತ್ತ್ವ. ಇಲ್ಲಿ ರೇಡಿಯೊ ತರಂಗಗಳನ್ನು ಅಲ್ಪಾವಧಿ ಸ್ಫುರಣಗಳ (ಷಾರ್ಟ್ ಪಲ್ಸಸ್) ರೂಪದಲ್ಲಿ ಉತ್ಪಾದಿಸಿ ಉಪಗ್ರಹದೆಡೆಗೆ ಕಳುಹಿಸುತ್ತಾರೆ. ಆಗ ಆ ಸ್ಫುರಣಗಳು ಉಪಗ್ರಹವನ್ನು ಮುಟ್ಟಿ ಅಲ್ಲಿಂದ ಮರಳಿಬರಲು ಹಿಡಿಸುವ ಅವಧಿಯಿಂದ ಉಪಗ್ರಹದ ದೂರ ಕೂಡ ನಿಷ್ಕರ್ಷಿತವಾಗುತ್ತದೆ. ಉಪಗ್ರಹದೊಳಗಿನ ಉಪಕರಣಗಳೆಲ್ಲವೂ ಕೆಟ್ಟು ನಿಷ್ಕ್ರಿಯವಾಗಿದ್ದರೂ ರೇಡಾರ್ ವಿಧಾನದಿಂದ ಅದರ ಗತಿವೀಕ್ಷಣೆಯನ್ನು ನಿರ್ವಹಿಸಲು ಸಾಧ್ಯವಾಗುವುದು. (ಆದರೆ ಭೂಮಿಯಿಂದ ಅತಿದೂರ ಸರಿದುಹೋಗಿರುವ ಅಂತರಿಕ್ಷವಾಹನಗಳು ಪ್ರತಿಫಲಿಸಿ ಹಿಂತಿರುಗಿಸುವ ರೇಡಾರ್ ಸಂಕೇತಗಳು ತೀರ ದುರ್ಬಲ ಸ್ಥಿತಿಯಲ್ಲಿ ಭೂಮಿಗೆ ಮರಳುವುದ ರಿಂದ ಅಂಥ ವಾಹನಗಳನ್ನು ನೇರ ರೇಡಾರ್ ವಿಧಾನದಿಂದ ಗುರುತಿಸಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ರೇಡಾರ್ ಕ್ರಮದಿಂದ ವಾಹನದ ಗತಿಯನ್ನು ವೀಕ್ಷಿಸಲು ವಾಹನದೊಳಗೆ ರೇಡಾರ್ ಬೀಕನ್ ಅಥವಾ ಟ್ರ್ಯಾನ್ಸ್‌ಪಾಂಡರ್ ಎಂಬ ವ್ಯವಸ್ಥೆಯನ್ನು ಅಳವಡಿಸಿರಬೇಕಾಗುತ್ತದೆ. ಭೂಮಿಯಿಂದ ಆಗಮಿಸಿದÀ್ಸರೇಡಾರ್ ಸಂಕೇತಗಳು ಈ ವ್ಯವಸ್ಥೆಯನ್ನು ಪ್ರಚೋದಿಸಿದ ತತ್ಕ್ಷಣ ಅದು ವಾಹನದೊಳಗಿರುವ ವಿದ್ಯುಚ್ಛಕ್ತಿಯನ್ನು ಬಳಸಿಕೊಂಡು ಭಿನ್ನ ತರಂಗಾತರವ ನ್ನುಳ್ಳ ತನ್ನದೇ ರೇಡಿಯೊ ತರಂಗಗಳನ್ನು ಉತ್ಪಾದಿಸಿ ಭೂಮಿಗೆ ಕಳುಹಿಸಿಕೊಡುವುದು. ಟ್ರ್ಯಾನ್ಸ್‌ಪಾಂಡರ್ ವ್ಯವಸ್ಥೆ ಸಕ್ರಿಯವಾಗಿರುವವರೆಗೂ ಈ ಮಾರ್ಗದಿಂದ ವಾಹನದ ಚಲನೆಯನ್ನು ವೀಕ್ಷಿಸಬಹುದು.) ರೇಡಿಯೊ ವೃತಿಕರಣಮಾಪನವೆಂಬ (ರೇಡಿಯೊ ಇಂಟರ್ಫಿಯರೋಮೆಟ್ರಿ) ಬೇರೊಂದು ರೇಡಿಯೊ ವೀಕ್ಷಣವಿಧಾನದಲ್ಲಿ ಉಪಗ್ರಹದೊಳಗೆ ಉತ್ಪಾದಿತವಾದ ರೇಡಿಯೋ ತರಂಗಗಳನ್ನು ಭೂಮಿಯ ಮೇಲಿರುವ ವೀಕ್ಷಣಕೇಂದ್ರದಲ್ಲಿ ಒಂದಕ್ಕೆ ಬದಲು ಹಲವು ಬೇರೆ ಬೇರೆ ಆ್ಯಂಟೆನಗಳ ಮೂಲಕ ಏಕಕಾಲಿಕವಾಗಿ ಗ್ರಹಿಸಲಾಗು ವುದು. ಭಿನ್ನ ಸ್ಥಾನಗಳಲ್ಲಿ ನೆಟ್ಟಿರುವ ಆಂಟೆನಗಳಿಂದ ಹೀಗೆ ಸ್ವೀಕೃತವಾದ ತರಂಗಗಳಿಗೆ ಸ್ವಲ್ಪ ದಶಾಂತರಗಳನ್ನಳೆದು (ಫೇಸ್ ಡಿಫರೆನ್ಸ್‌). ವ್ಯತಿಕರಣಮಾರ್ಗದಲ್ಲಿ ಇಂಥ ದಶಾಂತರಗಳ ನ್ನಳೆದು ಉಪಗ್ರಹದ ಸ್ಥಾನವನ್ನು ನಿಖರವಾಗಿ ನಿಷ್ಕರ್ಷಿಸುತ್ತಾರೆ. ಗತಿವೀಕ್ಷಣೆಯ ರೇಡಿಯೊ ವಿಧಾನಗಳ ಬಗ್ಗೆ ಗಮನಿಸಬೇಕಾದ ಇನ್ನೊಂದು ಅಂಶ ಇಲ್ಲಿ ಬಳಕೆಯಾಗುವ ರೇಡಿಯೊ ತರಂಗಗಳು ಡಾಪ್ಲರ್ ಪರಿಣಾಮಕ್ಕೆ (ನೋಡಿ) ಗುರಿಯಾಗುತ್ತವೆಂಬುದು. ಅಂತರಿಕ್ಷವಾಹನ ದೊಳಗೆ ಉತ್ಪಾದನೆಯಾದಾಗ ವಾಹನಕ್ಕೆ ಸಾಪೇಕ್ಷವಾಗಿ ಅವಕ್ಕಿರುವ ಆವರ್ತನ ಸಂಖ್ಯೆಯೇ (ಫ್ರೀಕ್ವೆನ್ಸಿ) ಬೇರೆ, ಭೂಮಿಯ ಮೇಲಿನ ಆ್ಯಂಟೆನಗಳಿಂದ ಸ್ವೀಕೃತವಾದಾಗ ಆ ಭೂಮೇಲ್ಮೈಗೆ ಸಾಪೇಕ್ಷವಾಗಿ ಅವುಗಳಲ್ಲಿ ಗೋಚರಿಸುವ ಆವರ್ತನ ಸಂಖ್ಯೆಯೇ ಬೇರೆ. ಭೂಮೇಲ್ಮೈಯ ಮತ್ತು ವಾಹನದ ನಡುವಿನ ಪರಸ್ಪರ ಸಾಪೇಕ್ಷ ಚಲನೆಯೇ ಈ ಭೇದಕ್ಕೆ ಕಾರಣ. ಆದ್ದರಿಂದ ಆವರ್ತನ ಸಂಖ್ಯೆಗಳ ವ್ಯತ್ಯಾಸವನ್ನು ಉಪಯೋಗಿಸಿಕೊಂಡು ಅಂತರಿಕ್ಷವಾಹನಗಳ ವಿಗಮನ/ಅಭಿಗಮನ ವೇಳೆಗಳನ್ನು (ವೆಲಾಸಿಟಿ ಆಫ್ ರಿಸೆಷನ್/ಅಪ್ರೋಚ್; ರೇಡಿಯಲ್ ವೆಲಾಸಿಟಿ) ಸಹ ರೇಡಿಯೊ ಗತಿವೀಕ್ಷಣ ವಿಧಾನಗಳಲ್ಲಿ ನಿರ್ಧರಿಸಲು ಸಾಧ್ಯವಿದೆ. ಇಂದಿನ ವೀಕ್ಷಣಕೇಂದ್ರಗಳಲ್ಲಿ ಗತಿವೀಕ್ಷಣೆಗೆ ಸಂಬಂಧಿಸಿದ ಎಲ್ಲ ಲೆಕ್ಕಾಚಾರಗಳನ್ನೂ ಕ್ಷಿಪ್ರವಾಗಿ ಸ್ವಯಂಕ್ರಿಯಾತ್ಮಕ ವ್ಯವಸ್ಥೆಗಳೇ (ಆಟೋಮ್ಯಾಟಿಕ್ ಸಿಸ್ಟಮ್ಸ್‌) ನಿರ್ವಹಿಸುತ್ತವೆ.
ಕೆಲವು ಸನ್ನಿವೇಶಗಳಲ್ಲಿ ಉಪಗ್ರಹಗಳ ಚಲನೆಯನ್ನು ಉಪಕರಣಗಳ ನೆರವಿಲ್ಲದೆ ಬರಿಗಣ್ಣಿನಿಂದ ನೋಡಲು ಸಾಧ್ಯವಾಗುವುದೆಂಬ ಸಂಗತಿ ಜನಸಾಮಾನ್ಯರ ಆಸಕ್ತಿಯನ್ನು ಕೆರಳಿಸದಿರದು. ಇಂಥ ಅವಕಾಶವೊದಗುವುದು ಸೂರ್ಯಾಸ್ತಮಾನವಾದ ಬಳಿಕ ಹಾಗೂ ಸೂರ್ಯೋದಯಕ್ಕೆ ಮುಂಚೆ ಎರಡು ಮೂರು ತಾಸುಗಳ ಕಾಲ ಮಾತ್ರ. ಆಗ ವಾತಾವರಣ ದಲ್ಲಿ ಕತ್ತಲೆ ಇರುವುದರಿಂದ ಅದಕ್ಕೂ ಮೇಲುಗಡೆ (ನೆಲದಿಂದ ಕೆಲ ನೂರು ಕಿಮೀ. ಎತ್ತರದಲ್ಲಿ) ಸಂಚರಿಸುವ ಯಾವುದಾದರೊಂದು ಉಪಗ್ರಹ ಅತ್ಯಲ್ಪ ಪ್ರಮಾಣದಲ್ಲಿ ಪ್ರತಿಫಲಿಸುವ ಸೂರ್ಯರಶ್ಮಿಯೇ ಎದ್ದು ಕಾಣಿಸಲು ಸಾಧ್ಯವಿದೆ. ಅಂಥ ಸಂದರ್ಭದಲ್ಲಿ ಉಪಗ್ರಹ ಒಂದು ಚಲಿಸುತ್ತಿರುವ ನಕ್ಷತ್ರದಂತೆ ಕೆಲವು ಮಿನಿಟುಗಳ ಕಾಲ ಬರಿಗಣ್ಣ ವೀಕ್ಷಕರ ಗೋಚರಕ್ಕೆ ಬರುತ್ತದೆ. ಭೂಮೇಲ್ಮೈಯಲ್ಲಿರುವ ಕೇಂದ್ರಗಳಲ್ಲಿ ನೇರ ದೃಶ್ಯ (ಆಪ್ಟಿಕಲ್) ವಿಧಾನದಿಂದ ಉಪಗ್ರಹಗಳ ಗತಿವೀಕ್ಷಣೆಯನ್ನು ನಿರ್ವಹಿಸಲು ಸಾಧ್ಯವಾಗುವುದೂ ಇಂಥ ಸಂದರ್ಭಗಳಲ್ಲಿ ಮಾತ್ರವೇ. ಆಕಾಶದಲ್ಲಿ ಹೊಳೆಯುತ್ತ ಚಲಿಸುವ ಉಪಗ್ರಹದ ಮಾರ್ಗರೇಖೆಯ ಚಿತ್ರವನ್ನು ಸ್ಥಿರನಕ್ಷತ್ರಗಳ ಹಿನ್ನೆಲೆಯೊಡನೆ ತೆಗೆದುಕೊಂಡು ಅದರಿಂದ ಉಪಗ್ರಹದ ಚಲನೆಯನ್ನು ವಿಶ್ಲೇಷಿಸುವುದಕ್ಕೆ ನೇರ ದೃಶ್ಯವಿಧಾನವೆಂದು ಹೆಸರು. ಇದಕ್ಕಾಗಿ ವಿಶೇಷ ನಿಯೋಜನೆಯ ದೊಡ್ಡ ದೊಡ್ಡ ಕ್ಷಿಪ್ರಗ್ರಾಹಿ (ಫಾಸ್ಟ್‌) ಕ್ಯಾಮರಗಳು ಅಗತ್ಯ. ಇವುಗಳಲ್ಲಿ ಕಿಟಕಿಯನ್ನು (ಷಟರ್) ನಿಯತಕಾಲಿಕವಾಗಿ ಒಂದೇ ಸಮನೆ ಮುಚ್ಚಿತೆರೆಯುವ ವ್ಯವಸ್ಥೆ ಮಾಡಿರುತ್ತಾರೆ. ಇದರಿಂದ ಉಪಗ್ರಹದ ಚಿತ್ರೀಕೃತ ಮಾರ್ಗರೇಖೆಯಲ್ಲಿ ಕೆಲವಾರು ಭಿನ್ನ ಭಿನ್ನ ಖಂಡಗಳು (ಸೆಗ್ಮೆಂಟ್ಸ್‌) ಏರ್ಪಟ್ಟು ಕ್ಷಣ ಕ್ಷಣಕ್ಕೂ ಆ ಉಪಗ್ರಹ ಯಾವ ದಿಸೆಯಲ್ಲಿದ್ದಿತೆಂಬ ಬಗ್ಗೆ ನಿಖರ ಮಾಹಿತಿ ದೊರಕುವುದು. ನಿಖರತೆಯಲ್ಲಿ ಬೇರಾವ ಗತಿವೀಕ್ಷಣಮಾರ್ಗವೂ ನೇರದೃಶ್ಯ ವಿಧಾನಕ್ಕೆ ಸಾಟಿಯಾಗದು. ಆದರೆ ಇದು ಎಲ್ಲ ಸಮಯಗಳಿಗೂ ಒದಗಿಬರುವಂಥದಲ್ಲವಾದ ಕಾರಣ ರೇಡಿಯೊ ರೇಡಾರ್ ಮಾರ್ಗಗಳಿಂದ ನಿಷ್ಕರ್ಷಿತವಾದ ವಿವರಗಳನ್ನು ತಾಳೆ ನೋಡಿ ಸಂಸ್ಕರಿಸುವಲ್ಲಿ ಮಾತ್ರ ನೇರದೃಶ್ಯವಿಧಾನ ವಿಶಿಷ್ಟ ಉಪಯುಕ್ತತೆಯನ್ನು ಗಳಿಸಬಲ್ಲುದು.
ಉಪಗ್ರಹಗಳನ್ನು ವಿವಿಧ ತಲಗಳಲ್ಲಿ ಭೂಕೇಂದ್ರದ ಸುತ್ತ ಪರಿಭ್ರಮಿಸುವಂತೆ ಉಡಾಯಿಸಬಹುದು. ಭೂಧ್ರುವಗಳ ಮುಖಾಂತರ ಹಾದುಹೋಗುವ ತಳಗಳಲ್ಲಿ ಏರ್ಪಟ್ಟ ಉಪಗ್ರಹ ಕಕ್ಷೆಗಳು ಧ್ರುವೀಯ ಕಕ್ಷೆಗಳೆನಿಸುತ್ತವೆ (ಪೋಲಾರ್ ಆರ್ಬಿಟ್ಸ್‌). ಸಮಭಾಜಕವೃತ್ತದ ತಳದಲ್ಲಿರುವ ಕಕ್ಷೆಗಳಿಗೆ ಸಮಭಾಜಕೀಯ ಕಕ್ಷೆಗಳೆಂದು (ಈಕ್ವೆಟೋರಿಯಲ್ ಆರ್ಬಿಟ್ಸ್‌) ಹೆಸರು. ಇವೆರಡು ವರ್ಗಗಳಿಗೂ ಸೇರದ ಕಕ್ಷೆಗಳನ್ನು ಓರೆಕಕ್ಷೆಗಳೆಂದು (ಅಬ್ಲೀಕ್ ಆರ್ಬಿಟ್ಸ್‌) ಕರೆಯಬಹುದು. ಆದರ್ಶ ಸನ್ನಿವೇಶದಲ್ಲಿ ಉಪಗ್ರಹವೊಂದರ ಆಕಾಶಮಾರ್ಗವನ್ನು ಭೂಕೇಂದ್ರದಿಂದ ವೀಕ್ಷಿಸಿದಾಗ ಮಾತ್ರ ಅದು ನಕ್ಷತ್ರಗಳ ಹಿನ್ನೆಲೆಯಲ್ಲಿ ಒಂದೇ ನಿಶ್ಚಲ ತಲದಲ್ಲಿರುವಂತೆ ಕಾಣಲು ಸಾಧ್ಯ. (ಆದರೆ ವಾಸ್ತವಿಕ ಪರಿಸ್ಥಿತಿಯಲ್ಲಿ ಹಿಂದೆ ತಿಳಿಸಿರುವ ಪಲ್ಲಟಕಾರಿ ಪ್ರಭಾವಗಳ ಫಲವಾಗಿ ಭೂಕೇಂದ್ರದಿಂದ ವೀಕ್ಷಿಸಿದಾಗಲೂ ಉಪಗ್ರಹ ಚಲಿಸುವ ತಲ ಸ್ವಲ್ಪ ಸ್ವಲ್ಪವಾಗಿ ವ್ಯತ್ಯಸ್ತವಾಗುತ್ತ ಹೋಗುವುದು. ಭೂಮಿ ತನ್ನ ಅಕ್ಷದ ಮೇಲೆ ಆವರ್ತಿಸುತ್ತಿರುವುದರಿಂದಲೂ ಸಮೀಪ ಕಾಯಗಳು ಅಪಾರ ದೃಗಂತರ ಪಲ್ಲಟಕ್ಕೆ (ಪ್ಯಾರಲ್ಯಾಷಿಫ್ಟ್‌) ಗುರಿಯಾಗುವುದರಿಂದಲೂ ಭೂ ಮೇಲ್ಮೈಯಿಂದ ವೀಕ್ಷಿಸಿದಾಗ ಸಾಧಾರಣವಾಗಿ ಉಪಗ್ರಹಗಳ ಆಕಾಶ ಮಾರ್ಗಗಳು ನಕ್ಷತ್ರಗಳ ಹಿನ್ನೆಲೆಯಲ್ಲಿ ಸ್ಥಿರವಾಗಿರುವಂತೆ ಕಾಣಬರುವುದೇ ಇಲ್ಲ. ಉದಾಹರಣೆಗೆ ಸಮಭಾಜಕ ವೃತ್ತದ ಮೇಲಿರುವ ಇ ಸ್ಥಳದಿಂದ ನೋಡಿದಾಗ ನಿನ್ನೆ ರಾತ್ರಿ ೯ ಗಂಟೆಗೆ S ಉಪಗ್ರಹ ಕಿ ನಕ್ಷತ್ರದ ದಿಸೆಯಲ್ಲಿ ಗೋಚರವಾಗಿರಬಹುದು (ಚಿತ್ರ ೫.)
ಈ ಉಪಗ್ರಹದ ಪರಿಭ್ರಮಣಾವಧಿ ೧೧೫ ಮಿನಿಟುಗಳೆಂದಿಟ್ಟುಕೊಳ್ಳೋಣ. ಹಾಗಿದ್ದಲ್ಲಿ ಉಪಗ್ರಹ ೧೨ ಪೂರ್ವ ಪರಿಭ್ರಮಣಗಳ ಬಳಿಕ ಇಂದು ರಾತ್ರಿ ೮ ಗಂಟೆಗೆ ಭೂಕೇಂದ್ರ ಸಾಪೇಕ್ಷವಾಗಿ ಮತ್ತೆ S ಸ್ಥಾನಕ್ಕೇ ಹಿಂತಿರುಗುತ್ತದೆ. ಆದರೆ ಈ ಸಮಯದಲ್ಲಿ ವೀಕ್ಷಣ ಸ್ಥಳ ಭೂಕೇಂದ್ರ ಸಾಪೇಕ್ಷವಾಗಿ ಹಿಂದಿನ ಸ್ಥಾನದಲ್ಲಿರದೆ ಅದಕ್ಕೆ ಸುಮಾರು ೧೪೦ ಹಿಂದೆ ಇರುವ ಈ ಎಂಬ ಭಿನ್ನಸ್ಥಾನ ದಲ್ಲಿರುವುದರಿಂದ ಗೋಚರಿಸಿದ ಉಪಗ್ರಹವೇ ಈಗ ಖ ಎಂಬ ಬೇರೊಂದು ನಕ್ಷತ್ರದ ದಿಸೆಯಲ್ಲಿ ಕಾಣಿಸಿಕೊಳ್ಳುವುದು. ಅಲ್ಲದೆ ಈ ಉಪಗ್ರಹ ಧ್ರುವೀಯ ಅಥವಾ ಓರೆಕಕ್ಷೆ ಯೊಂದರಲ್ಲಿ ಚಲಿಸುತ್ತಿದ್ದರೆ ಅದು ಇಂದು ಬೇರಾವ ಸಮಯದಲ್ಲೂ ನಕ್ಷತ್ರದ ದಿಸೆಯಲ್ಲಿ ಕಾಣಿಸುವುದೇ ಇಲ್ಲ. ಮೇಲಾಗಿ ಧ್ರುವೀಯ ಕಕ್ಷೆಯೊಂದರ ಯಾವ ಅರ್ಧಭಾಗ ವೀಕ್ಷಕನ ನೋಟಕ್ಕೆ ಲಭಿಸಿದೆ ಎಂಬುದನ್ನು ಅವಲಂಬಿಸಿ ಆ ಕಕ್ಷೆಯಲ್ಲಿ ಚಲಿಸುವ ಒಂದೇ ಉಪಗ್ರಹ ಕೆಲವೊಮ್ಮೆ ಉತ್ತರದಿಂದ ದಕ್ಷಿಣಕ್ಕೂ ಕೆಲವೊಮ್ಮೆ ದಕ್ಷಿಣದಿಂದ ಉತ್ತರಕ್ಕೂ ಸಂಚರಿಸು ವಂತೆ ಆತನಿಗೆ ಕಾಣಬಹುದು.
ಅನೇಕ ಉಪಗ್ರಹಗಳು ತಮ್ಮ ಆಂತರಿಕ ಹಾಗೂ ಬಾಹ್ಯ ಪರಿಸರ ಗಳನ್ನು ಸಂಶೋಧಿಸಿ ಅಲ್ಲಿಯ ಭೌತ ಪರಿಸ್ಥಿತಿಗಳನ್ನು ವಿಶ್ವದ ವಿವಿಧ ಮೂಲೆಗಳಿಂದ ಆಗಮಿಸುವ ಕಿರಣಗಳ ಮತ್ತು ಸೂಕ್ಷ್ಮ ಕಣಾವಳಿಗಳ ಪರಿಮಾಣಗಳನ್ನು ನಿಖರವಾಗಿ ಅಳೆಯಬಲ್ಲವು. ಹೀಗೆ ಉಪಗ್ರಹಕ್ಕೆ ದೊರೆತ ಅಳತೆಗಳನ್ನು ಅದು ರೇಡಿಯೊ ಸಂಕೇತಗಳ ಮೂಲಕ ಭೂಮೇಲ್ಮೈಯಲ್ಲಿರುವ ವೀಕ್ಷಣಕೇಂದ್ರಗಳಿಗೆ ಕಳುಹಿಸಿಕೊಡುತ್ತದೆ. ಈ ಕೇಂದ್ರಗಳಲ್ಲಿ ಗಣಕಯಂತ್ರಗಳ ಸಹಾಯದಿಂದ ಅಂಥ ರೇಡಿಯೊ ಸಂಕೇತಗಳನ್ನು ವಿಶ್ಲೇಷಿಸಿ ಉಪಗ್ರಹದಲ್ಲಿ ನಿರ್ವಹಣೆಯಾದ ಮೂಲ ಅಳತೆಗಳನ್ನು ಪುನಾರ್ರಚಿಸುತ್ತಾರೆ. ಅಳತೆಗಳ ಮಾಹಿತಿಯನ್ನು ಗಳಿಸುವ ಈ ತಂತ್ರಕ್ಕೆ ದೂರಗ್ರಾಹ್ಯ ಮಾಪನವೆಂದು (ಟೆಲಿಮೆಟ್ರಿ) ಹೆಸರು. ದೂರಗ್ರಾಹ್ಯಮಾಪನ ಇಪ್ಪತ್ತನೆಯ ಶತಮಾನದ ವೈಜ್ಞಾನಿಕ ಸಂಶೋಧನೆಗಳಿಗೊಂದು ಹೊಸ ಆಯಾಮವನ್ನು ನೀಡಿದೆ. ಕೆಲವು ವೇಳೆ ಉಪಗ್ರಹಗಳು ಅಳತೆಗಳಷ್ಟನ್ನೇ ಅಲ್ಲದೆ ಖಗೋಳಯಾತ್ರಿಕರ ಮಾತುಗಳನ್ನೂ ವಿವಿಧ ದೃಶ್ಯಗಳ ಟೆಲಿವಿಷನ್ ಚಿತ್ರಗಳನ್ನೂ ಭೂಮಿಗೆ ಪ್ರಸಾರಮಾಡಬೇಕಾಗಬಹುದು. ಅಂಥ ಉಪಗ್ರಹಗಳಲ್ಲಿ ಇವೆಲ್ಲ ಕಾರ್ಯಕ್ರಮಗಳ ದಕ್ಷ ನಿರ್ವಹಣೆಗಾಗಿ ಸೂಕ್ತ ಪ್ರೇಷಕ ವ್ಯವಸ್ಥೆಗಳಿರುತ್ತವೆ. ಭೂ ಮೇಲ್ಮೈಯಲ್ಲಿರುವ ಗ್ರಾಹಕ ಕೇಂದ್ರಗಳು ಉಪಗ್ರಹದ ಗತಿಯನ್ನು ವೀಕ್ಷಿಸುವುದರ ಜೊತೆಗೆ ಅಲ್ಲಿಂದ ಆಗಮಿಸುವ ಸಕಲ ಬಗೆಯ ಸಾಂಕೇತಿಕ ಮಾಹಿತಿಗಳನ್ನೂ ತಮ್ಮ ಬೃಹತ್ಆ್ಯಂಟೆನಗಳ ಮೂಲಕ ಸ್ವೀಕರಿಸಿ ವಿಶ್ಲೇಷಿಸುತ್ತವೆ. 
ಕೃತಕ ಉಪಗ್ರಹಗಳ ಉಪಯೋಗಗಳು: ನಾಲ್ಕುವಿಭಾಗಗಳಲ್ಲಿ ಇವನ್ನು ಅಭ್ಯಸಿಸ ಬಹುದು-ಸಂಪರ್ಕ ಉಪಗ್ರಹಗಳು. ಹವಾಮಾನ ಉಪಗ್ರಹಗಳು, ನೌಕಾ ಉಪಗ್ರಹಗಳು, ವೈಜ್ಞಾನಿಕ ಉಪಗ್ರಹಗಳು (ನೋಡಿ-[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಅಂತರಿಕ್ಷ, ಸಂಶೋಧನೆ ಅಪೊಲೊ).
ಪ್ರಥಮ ಸ್ಪುಟ್ನಿಕಿನ ಉಡಾವಣೆಯಿಂದೀಚೆಗೆ ಬಗೆಬಗೆಯ ಉಪಗ್ರಹಗಳನ್ನು ಸಹಸ್ರಾರು ಸಂಖ್ಯೆಯಲ್ಲಿ ಅಂತರಿಕ್ಷಕ್ಕೆ ಉಡಾಯಿಸಲಾಗಿದೆ. ಆಧುನಿಕ ಉಪಗ್ರಹಗಳಲ್ಲಿರುವ ಯಂತ್ರೋಪ ಕರಣ ವ್ಯವಸ್ಥೆ ಸಂಕೀರ್ಣ ಹಾಗೂ ವೈವಿಧ್ಯಪೂರ್ಣ. ವೈಜ್ಞಾನಿಕ ಸಂಶೋಧನೆಗಳಲ್ಲಿ, ಅತಿವೇಗದ ವಿಮಾನ ಕ್ಷಿಪಣಿಗಳ ಮಾರ್ಗದರ್ಶನದಲ್ಲಿ, ಹವಾಮುನ್ಸೂಚನೆಗಳ ನಿಷ್ಕರ್ಷೆಯಲ್ಲಿ, ಭೂಮಿಯ ಮೇಲೆ ದೀರ್ಘವ್ಯಾಪಕ ಟೆಲಿಫೋನ್ ಸಂಪರ್ಕಗಳ ಸಂಸ್ಥಾಪನೆಯಲ್ಲಿ. ಬಾಹ್ಯಾಕಾಶಯಾನಿಗಳ ತರಬೇತಿಯಲ್ಲಿ ಹಾಗೂ ಆಕಾಶಾಧಾರಿತ ಕೈಗಾರಿಕೆಗಳ ನಿಯೋಜನೆ ಯಲ್ಲಿ ಉಪಗ್ರಹಗಳು ನಿರ್ವಹಿಸುವ ಪಾತ್ರ ಅಮೂಲ್ಯವಾದುದು. ಸಂಶೋಧನ ಕ್ಷೇತ್ರದಲ್ಲಿ ಭೂಮಿಯ ವಾಯುಮಂಡಲದ ಬಾಹ್ಯವಲಯಗಳ ಸ್ವರೂಪ. ಭೂಮಿಯ ಆಕಾರ ಹಾಗೂ ಗುರುತ್ವಾಕರ್ಷಣೆ, ವಿಶ್ವದ ಬೇರೆಡೆಗಳಿಂದ ಭೂಮಿಯ, ಬಳಿಗೆ ಆಗಮಿಸುವ ಕಣ ಪ್ರವಾಹಗಳು ಮತ್ತು ದೃಶ್ಯಾದೃಶ್ಯ ರಶ್ಮಿಗಳು. ಭೂಪರಿಸರದ ಕಾಂತ ಕ್ಷೇತ್ರ, ಆಕಾಶದಲ್ಲಿ ಉಲ್ಕಾಧೂಳಿಯ ಹಂಚಿಕೆ, ಜೀವಗಳ ಮೇಲೆ ಆಕಾಶಯಾನದ ಪ್ರಭಾವ-ಇವೇ ಮುಂತಾದ ವಿಚಾರಗಳ ಬಗ್ಗೆ ತನಿಖೆ ನಡೆಸಲು ಉಪಗ್ರಹಗಳು ವಿಜ್ಞಾನಿಗಳಿಗೆ ನೆರವಾಗಿವೆ. ವಾಯುಯಾನ-ಕ್ಷಿಪಣಿಯಾನ ಕ್ಷೇತ್ರದಲ್ಲಿ ಸೂಕ್ತ ಮಾರ್ಗದರ್ಶಕ ಉಪಗ್ರಹಗಳು (ನ್ಯಾವಿಗೇಷನಲ್ ಸ್ಯಾಟಲೈಟ್ಸ್‌) ತಮ್ಮಿಂದ ಪ್ರಸಾರವಾಗುವ ರೇಡಿಯೊ ಸಂಕೇತಗಳ ಮೂಲಕ ವಿಮಾನ ಕ್ಷಿಪಣಿಗಳಿಗೆ ನಿಯೋಜಿತ ಮಾರ್ಗದಲ್ಲಿ ಚಲಿಸುವಂತೆ ನಿಖರ ನಿರ್ದೇಶನ ನೀಡಬಲ್ಲವು. ಹವಾವಿಜ್ಞಾನ ಕ್ಷೇತ್ರದಲ್ಲಿ ಪವನೋಪ ಗ್ರಹಗಳು (ಮೀಟಿಯರೇಲಾಜಿಕಲ್ ಸ್ಯಾಟಲೈಟ್ಸ್‌) ಭೂಮಿಯ ವಿವಿಧ ಭಾಗಗಳ ಮೇಲೆ ನೆರೆದಿರುವ ಮೇಘರಾಶಿಗಳ ಚಿತ್ರಗಳನ್ನು ತೆಗೆದುಕೊಳ್ಳತ್ತವೆ. ಮತ್ತು ಅಲ್ಲಿಗೆ ಸಂಬಂಧಿಸಿದ ಉಷ್ಣ ವಿಸರಣ ದರವನ್ನು ಅಳೆಯುತ್ತವೆ. ಭಾರತದಲ್ಲಿ ಇಂಥ ಉಪಗ್ರಹಗಳಿಂದ ಮೇಘಚಿತ್ರಗಳನ್ನು ಸ್ವೀಕರಿಸುವ ಕೇಂದ್ರಗಳು ಕೊಲಾಬ (ಮುಂಬಯಿ), ಕೋಲ್ಕತ ಮದ್ರಾಸ್ ಮತ್ತು ದೆಹಲಿಗಳಲ್ಲಿವೆ. ಪವನೋಪಗ್ರಹಗಳು ಸಂಗ್ರಹಿಸುವ ವ್ಯಾಪಕ ದತ್ತಾಂಶಗಳ ನೆರವಿನಿಂದ ದೀರ್ಘಕಾಲಿಕ ಹವಾಮುನ್ಸೂಚನೆಗಳನ್ನು ನೀಡಲು ಇಂದು ಸಾಧ್ಯವಾಗಿದೆ. ಟೆಲಿಫೋನ್ ಟೆಲಿವಿಷನುಗಳಂಥ ಸಂಪರ್ಕ ವ್ಯವಸ್ಥೆಗಳ ಕ್ಷೇತ್ರದಲ್ಲಿ ಸೂಕ್ತ ನಿಯೋಜನೆಯ ಉಪಗ್ರಹಗಳು ಭೂಮೇಲ್ಮೈಯಿಂದ ಬರುವ ವಿದ್ಯುತ್ಕಾಂತಸಂಕೇತಗಳನ್ನು ಗ್ರಹಿಸಿ ಶಕ್ತಿವರ್ಧನೆ ಮಾಡಿ ಮತ್ತೆ ಭೂಮಿಯೆಡೆಗೆ ಮರುಪ್ರಸಾರ ಮಾಡುವುದರ ಮೂಲಕ ಭೂಮೇಲ್ಮೈಯಲ್ಲಿ ದೂರವಾಗಿರುವ ಪ್ರೇಷಕ-ಗ್ರಾಹಕ ಕೇಂದ್ರಗಳ ನಡುವೆ ಸಂಬಂಧ ಕಲ್ಪಿಸುತ್ತವೆ. (ಹ್ರಸ್ವ ತರಂಗಾಂತರದ ಸಂಕೇತಗಳು ಸರಳರೇಖೆಯಲ್ಲೇ ಚಲಿಸುವುದರಿಂದ ಭೂಮಿಯ ವಕ್ರತೆಯನ್ನು ಬಳಸಿಕೊಂಡು ಒಂದೇ ಮಜಲಿನಲ್ಲಿ ಪ್ರೇಷಕ ಕೇಂದ್ರದಿಂದ ಗ್ರಾಹಕಕೇಂದ್ರದೆಡೆಗೆ ಸಂಚರಿಸಲು ಅವಕ್ಕೆ ಸಾಧ್ಯವಾಗುವುದಿಲ್ಲ.) ಇಂಥ ಹಲವಾರು ಮರುಪ್ರಸಾರಕಾರಿ ಸಂಪರ್ಕೋಪಗ್ರಹಗಳು (ಆಕ್ಟಿವ್ ಕಮ್ಯೂನಿಕೇಷನ್ ಸ್ಯಾಟಲೈಟ್ಸ್‌) ಕಕ್ಷೆಗಳಲ್ಲಿ ನಿಂತು ಜನರ ನಿತ್ಯಜೀವನದ ವ್ಯವಹಾರಗಳ ಮೇಲೆ ಇಂದು ಕ್ರಾಂತಿಕಾರಕ ಪ್ರಭಾವವನ್ನು ಬೀರುತ್ತಿವೆ. ಇವುಗಳ ಪೈಕಿ ಇಂಟರ್ನ್ಯಾಷನಲ್ ಟೆಲಿಕಮ್ಯೂನಿಕೇಷನ್ಸ್‌ ಕನ್ಸಾರ್ಟಿಯಮ್ಮಿನ ಮಾಲಿಕತ್ವದಲ್ಲಿ ಅಟ್ಲಾಂಟಿಕ್, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರಗಳ ಮೇಲೆ ಸ್ಥಾಪಿತವಾಗಿರುವ ಭೂಸಮಶ್ಚರ ವ್ಯವಸ್ಥೆಗಳು ಮುಖ್ಯವಾದುವು. ಭೂಮೇಲ್ಮೈಯಿಂದ ೩೫,೮೭೦ ಕಿಮೀ. ಎತ್ತರದಲ್ಲಿ ಸಮಭಾಜಕ ವೃತ್ತಕ್ಕೆ ಸಮಾಂತರವಾಗಿ ಚಲಿಸುತ್ತಿದ್ದು ಭೂಮಿಯನ್ನು ಒಮ್ಮೆ ಪರಿಭ್ರಮಿಸಲು ೨೩ ಗಂಟೆ ೫೬ ಮಿನಿಟುಗಳನ್ನು ತೆಗೆದುಕೊಳ್ಳವುದೇ ಇಂಥ ಸಮಶ್ಚರ (ಸಿನ್ಕ್ರೊನಸ್) ಉಪಗ್ರಹಗಳ ವೈಶಿಷ್ಟ್ಯ. ಇದೇ ವಿಶಿಷ್ಟ ಅವಧಿಯಲ್ಲಿ ಭೂಮಿ ಕೂಡ ತನ್ನ ಅಕ್ಷದ ಮೇಲೆ ಒಂದು ಸಲ ಆವರ್ತಿಸುವುದರಿಂದ ಭೂಮೇಲ್ಮೈಯಿಂದ ವೀಕ್ಷಿಸಿದಾಗ ಸಮಭಾಜಕೀಯ ಕಕ್ಷೆಯಲ್ಲಿರುವ ಸಮಶ್ಚರ ಸಂಪರ್ಕೋಪಗ್ರಹಗಳು ಚಲಿಸದೆ ಇದ್ದಲ್ಲಿಯೇ ಇರುವಂತೆ ಕಂಡು ಪ್ರೇಷಕ ಗ್ರಾಹಕ ಕೇಂದ್ರಗಳನ್ನು ನಿರಂತರ ಗತಿವೀಕ್ಷಣೆಯ ತೊಡಕುಗಳಿಂದ ಪಾರುಮಾಡುತ್ತವೆ. ಭಾರತದಲ್ಲಿ ಪ್ರಾಯೋಗಿಕವಾಗಿ ರಾಷ್ಟ್ರೀಯ ಮಟ್ಟದ ಟೆಲಿವಿಷನ್ ಪ್ರಸಾರ ವ್ಯವಸ್ಥೆಯೊಂದನ್ನು ರೂಪಿಸುವ ಸಲುವಾಗಿ ಅಮೆರಿಕದ ನ್ಯಾಸಾ ಸಂಸ್ಥೆಯ ನೆರವಿನಿಂದ ಎ.ಟಿ.ಎಸ್.-ಎಫ್ ಎಂಬ ಇಂಥದೇ ಒಂದು ಪ್ರತ್ಯೇಕ ಸಮಶ್ಚರ ಸಂಪರ್ಕೋಪಗ್ರಹವನ್ನು ೧೯೭೩ರ ವೇಳೆಗೆ ೨೦೦ ಪೂರ್ವ ರೇಖಾಂಶದ ಬಳಿ ಸಂಸ್ಥಾಪಿಸುವ ನೀರೀಕ್ಷೆಯಿದೆ. ಆ ಉಪಗ್ರಹದ ಉಪಯೋಗ ವನ್ನು ಭಾರತ ಎರಡು ವರ್ಷಗಳ ಮಟ್ಟಿಗೆ ಪಡೆಯಬಹುದು. ಅನಂತರ ಬೇರೊಂದು ಸಮಶ್ಚರ ಸಂಪರ್ಕೋಪಗ್ರಹವನ್ನು ಸ್ವತಂತ್ರವಾಗಿ ಉಡಾಯಿಸಲು ಸವಿವರ ಯೋಜನೆಯನ್ನು ಪರಮಾಣುಶಕ್ತಿ ಇಲಾಖೆಯ ಭಾರತೀಯ ಆಕಾಶ ಸಂಶೋಧನ ಸಂಘಟನೆ (ಇಂಡಿಯನ್ ಸ್ಟೇಸ್ ರಿಸರ್ಚ್ ಆರ್ಗನೈ¸óೇಷನ್) ಈಗಾಗಲೇ ಸಿದ್ಧಪಡಿಸಿಟ್ಟಿದೆ. ಇಂಥ ಸಂಪರ್ಕೋಪಗ್ರಹಗಳು ಅಸ್ತಿತ್ವಕ್ಕೆ ಬಂದಾಗ ಸಾಧಾರಣ ಟಿಲಿವಿಷನ್ ಸೆಟ್ಟುಗಳಿಗೆ ಸ್ಥಳೀಯ ಕಮ್ಮಾರರು ನಿರ್ಮಿಸಬಲ್ಲ ಪರ್ಯಾಬೊಲಾಕಾರದ ಆ್ಯಂಟೆನಗಳನ್ನು ಜೋಡಿಸಿಕೊಂಡು ಪ್ರೇಷಕ ಕೇಂದ್ರಗಳಿಂದ ಅತಿದೂರದಲ್ಲಿರುವ ಹಳ್ಳಿಗಳಲ್ಲಿ ಸಹ ರಾಷ್ಟ್ರೀಯ ಟೆಲಿವಿಷನ್ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗುವುದು. 
ಬಾಹ್ಯಾಕಾಶಕ್ಕೆ ತೆರಳುವ ಯಾನಿಗಳ ತರಬೇತಿಯಲ್ಲಿ ಉಪಗ್ರಹಗಳು ಪ್ರದರ್ಶಿಸಿರುವ ಉಪಯುಕ್ತತೆ ಸರ್ವವಿದಿತ. ಚಂದ್ರಲೋಕಕ್ಕೆ ಯಾನಿಗಳನ್ನು ಕಳುಹಿಸುವ ಮಹತ್ಸಾಧನೆಗೆ ಪೂರ್ವಭಾವಿಯಾಗಿ ಆ ಸಂಬಂಧದಲ್ಲಿ ಅವಶ್ಯವಾಗುವ ಸಹಸ್ರಾರು ಮಾಹಿತಿಗಳನ್ನು ಮಾನವಯುತ ಉಪಗ್ರಹಗಳ (ಮ್ಯಾನ್ಡ್‌ ಸ್ಯಾಟಲೈಟ್ಸ್‌) ಮೂಲಕವೇ ಸಂಗ್ರಹಿಸಲಾಯಿತು. ಮಾನವಯುತ ಉಪಗ್ರಹಗಳ ಪರಂಪರೆ ೧೯೬೧ ಏಪ್ರಿಲ್ ೧೨ರಂದು ಸೋವಿಯತ್ ಒಕ್ಕೂಟದ ಯೂರಿ ಗಗಾರಿನ್ನನನ್ನು ಕಕ್ಷೆಗೆ ಒಯ್ದು ಒಮ್ಮೆ ಭೂಪ್ರದಕ್ಷಿಣೆ ಮಾಡಿಸಿದ ವೋಸ್ಟೋಕ್ ೧ ಎಂಬ ಹೆಸರಿನ ವಾಹನದಿಂದ ಪ್ರಾರಂಭವಾಗಿ ಜೂನ್ ೧೯೭೦ರ ವರೆಗೆ ೧೬ ಸೋವಿಯತ್ ಉಪಗ್ರಹಗಳ್ನೂ ೧೮ ಅಮೆರಿಕನ್ ಉಪಗ್ರಹಗಳನ್ನೂ ಒಳಗೊಂಡಿದೆ (ಈ ಎಣಿಕೆಯಲ್ಲಿ ಚಂದ್ರನ ಪರಿಸರವನ್ನು ಮುಟ್ಟಿ ಹಿಂತಿರುಗಿರುವ ಅಮೆರಿಕದ ವಾಹನಗಳು ಸೇರಿಲ್ಲ). ಬಾಹ್ಯಾಕಾಶಯಾನಗಳ ಸಿದ್ಧತೆಗೆ ನೆರವಾಗಿರುವುದರ ಜೊತೆಗೆ ಮುಂದೆ ಭೂ ಪರಿಸರದಲ್ಲಿ ಆಕಾಶ ನಿಲ್ದಾಣಗಳೆಂಬ (ಸ್ಪೇಸ್ ಸ್ಟೇಷನ್ಸ್‌) ಮಾನವಯುತ ಬೃಹದುಪಗ್ರಹವ್ಯವಸ್ಥೆಗಳನ್ನು ನಿರ್ಮಿಸಲು ಅವಶ್ಯವಾಗುವ ಅನೇಕ ಉಪಯುಕ್ತ ಮಾಹಿತಿಗಳನ್ನು ಸಹ ಈ ಉಪಗ್ರಹಗಳು ಒದಗಿಸಿಕೊಟ್ಟಿವೆ. ಆಕಾಶ ನಿಲ್ದಾಣಗಳು ದೂರದ ಗ್ರಹಗಳೆಡೆಗೆ ಮಾಮೂಲಾಗಿ ವಾಹನಗಳನ್ನು ಉಡಾಯಿಸುವ ಹಾಗೂ ಆ ಗ್ರಹಗಳಿಂದ ಹಿಂತಿರುಗಿ ಬಂದ ವಾಹನಗಳನ್ನು ಇಳಿಸಿಕೊಳ್ಳುವ ಜಗುಲಿಗಳಾಗಬಲ್ಲವು. ಅಲ್ಲದೆ ದ್ರವ್ಯಗಳಲ್ಲಿ ಭಾರವಿಹೀನತೆ ಮುಂತಾದ ಅಸಾಮಾನ್ಯ ಅವಸ್ಥೆಗಳಿಗೆ ಜನ್ಮ ನೀಡಬಲ್ಲ ಕಕ್ಷಾಪರಿಸರವನ್ನು ಬೇಡುವ ಹೊಸ ಹೊಸ ಕೈಗಾರಿಕೋದ್ಯಮಗಳು ಕಾಲಕ್ರಮೇಣ ಅಂಥ ನಿಲ್ದಾಣಗಳಲ್ಲಿ ಅಂಕುರಿಸಿ ಪ್ರವರ್ಧಿಸಬಹುದು.	(ಎಸ್.ಆರ್.ಎಂ.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ